ಸೇತುವೆ, ರಸ್ತೆಯಿಲ್ಲದೆ ಸಂಕಷ್ಟ

Btw_bridge
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ ಎರಡು ಊರುಗಳನ್ನು ಸಂಪರ್ಕಿಸುವ ಬಹುಕಾಲದ ನಿರೀಕ್ಷೆಯ ಸೇತುವೆ ಸಹಿತ ಸರ್ವಋತು ರಸ್ತೆ ನಿರ್ಮಾಣಕ್ಕೆ ಅನುದಾನ ಲಭಿಸಿ ಸಂಪರ್ಕದ ಬೇಡಿಕೆ ಈಡೇರಿದ್ದರೂ ಕಾಮಗಾರಿ ವಿಳಂಬದಿಂದಾಗಿ ಜನರ ನಿರೀಕ್ಷೆ ಕೈಗೂಡದೆ ನನೆಗುದಿಗೆ ಬಿದ್ದಿದೆ. ಬಂಟ್ವಾಳ ತಾಲೂಕಿನ ಸಜಂಕಬೆಟ್ಟು ಭಾಗದಲ್ಲಿ ಸೇತುವೆ ಬಳಿ ಇಳಿಜಾರು ಪ್ರದೇಶವಿದ್ದು, ಮಳೆಗಾಲದಲ್ಲಿ ಹೊಳೆ ನೀರು ಹರಿದು ಬಂದು ಮುಳುಗಡೆಯಾಗುತ್ತದೆ. ಈ ಜಾಗದಲ್ಲಿ ರಸ್ತೆ ಎತ್ತರಿಸುವುದು ಅನಿವಾರ್ಯವಾಗಿದೆ. ಇಲ್ಲಿ ಸುಮಾರು ಅರ್ಧ ಕಿಮೀ ರಸ್ತೆ ಮಣ್ಣಿನದಾಗಿದ್ದು, ಮಳೆಗಾಲದಲ್ಲಿ ಹೊಂಡಗುಂಡಿಯಾಗಿದೆ. ಬೆಳ್ತಂಗಡಿ ಭಾಗದಲ್ಲಿ ಗುಂಡೂರಿಯಿಂದ ಸುಮಾರು ಒಂದೂವರೆ ಕಿಮೀ ರಸ್ತೆ ಡಾಂಬರೀಕರಣಗೊಂಡಿಲ್ಲ. ಮಳೆಗಾಲದಲ್ಲಿ ಇದರಲ್ಲಿ ಸಂಚಾರ ದುಸ್ತರ. ಹಾಗಾಗಿ ಎರಡೂ ಕಡೆ ರಸ್ತೆ ಅಭಿವೃದ್ಧಿಯಾಗಬೇಕಿದೆ. ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಾದ ಅಜ್ಜಿಬೆಟ್ಟು, ಪಿಲಿಮೊಗರು, ದಂಡೆಗೋಳಿ, ಕೊಡಂಬೆಟ್ಟು, ಚೆನ್ನೈತ್ತೋಡಿ ಹಾಗೂ ಸಮೀಪದ ವಗ್ಗ, ಪಂಜಿಕಲ್ಲು ಮೊದಲಾದ ಊರವರಿಗೆ ವೇಣೂರಿಗೆ ತೆರಳಲು ಪಾಂಗಲ್ಪಾಡಿಯಿಂದ ಅಜ್ಜಿಬೆಟ್ಟು , ಕೊರಗಟ್ಟೆ ರಸ್ತೆಯಾಗಿ ಸಜೆಂಕಬೆಟ್ಟುವಿನಿಂದ ಕೇವಲ 5 ಕಿಮೀ ಮಾತ್ರ ದೂರವಿದೆ. ಆದರೆ ಸಜಂಕಬೆಟ್ಟು ಬಳಿ ಕಿರುಹೊಳೆಗೆ ಸೇತುವೆ ನಿರ್ಮಾಣದಿಂದ ಹೊಳೆಯ ಇನ್ನೊಂದು ಬದಿಗೆ ಹೋಗಲು ಸಾಧ್ಯವಾಗುತ್ತದೆ. ಈ ಪ್ರದೇಶದ ಜನರು ವೇಣೂರಿಗೆ ಹೋಗಲು ನೇರಳಕಟ್ಟೆ -ನಯನಾಡು ರಸ್ತೆಯಾಗಿ ಸುಮಾರು 15 ಕಿಮೀ ದೂರದ ರಸ್ತೆ ಬಳಸಬೇಕಾಗಿದೆ. ವೇಣೂರಿನ ಪರಿಸರದ ಜನರಿಗೂ ವಾಮದಪದವಿಗೆ ಇದು ಸನಿಹದ ದಾರಿಯಾಗಿದೆ. ವೇಣೂರಿನವರಿಗೆ ವಾಮದಪದವು ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಜ್ಜಿಬೆಟ್ಟು ಪದವು ದೇವಸ್ಥಾನವೂ ಹತ್ತಿರವಾಗುತ್ತದೆ. ಇಲ್ಲಿ ಸರ್ವ ಋತು ರಸ್ತೆ ನಿರ್ಮಾಣವಾದಲ್ಲಿ ಜನತೆಗೆ ಬಹಳ ಅನುಕೂಲವಾಗುವುದು. ಸಂಬಂಧಿಸಿದ ಎರಡೂ ತಾಲೂಕುಗಳ ಇಲಾಖಾಧಿಕಾರಿಗಳು, ಜನಪ್ರತಿನಿಗಳು ಈ ಬಗ್ಗೆ ಗಮನ ಹರಿಸಿ ರಸ್ತೆ ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಬಂಟ್ವಾಳ ತಾಲೂಕು ವಾಮದಪದವಿನಿಂದ ಬೆಳ್ತಂಗಡಿ ತಾಲೂಕು ವೇಣೂರನ್ನು ಸಂಪರ್ಕಿಸಲು ಕಳೆದ ಮಾರ್ಚ್‌ನಲ್ಲಿ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಅವರ ಮುತುವರ್ಜಿಯಿಂದ 5.40 ಕೋಟಿ ರೂ.ವೆಚ್ಚದಲ್ಲಿ ಈ ತಾಲೂಕುಗಳ ಗಡಿಭಾಗದಲ್ಲಿರುವ ಅಜ್ಜಿಬೆಟ್ಟು ಗ್ರಾಮದ ಸಜಂಕಬೆಟ್ಟು ಬಳಿ ಬಜಿರೆ ಕಿರುಹೊಳೆಗೆ ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣಗೊಂಡಿದೆ. ಆದರೆ ಈ ಭಾಗದ ಜನತೆಯ ಎರಡು ಕಡೆ ಸಂಪರ್ಕದ ದೀರ್ಘ ಕಾಲದ ಕನಸು ಸೇತುವೆಯ ಎರಡೂ ಕಡೆ ರಸ್ತೆ ಅಭಿವೃದ್ಧಿ ಕಾಣದೆ ಈಡೇರಲೇ ಇಲ್ಲ.

ಈ ಸೇತುವೆ ನಿರ್ಮಾಣವಾದುದರಿಂದ ಹೆಚ್ಚಿನ ಸೌಲಭ್ಯಗಳು ದೊರೆತು ಜನರ ಪ್ರಯಾಣ ಹಾಗೂ ಸರಕು ಸಾಗಾಟ ಸುಗಮವಾಗಲಿದೆ. ಮಹಾಲಿಂಗ ಶರ್ಮ, ಸ್ಥಳೀಯರು. https://www.vijayavani.net/mangalore-asranna-yaksha-award-receved-artist-sadashiva-shettigar https://www.vijayavani.net/release-of-chilla-kriti-in-manjeshwar

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net