ಪಶುವೈದ್ಯಕೀಯ ಸೇವೆಗೆ ತೊಂದರೆ

Difficulty with veterinary services
Published on

ಮಡಿಕೇರಿ
ಗುಡ್ಡಗಾಡು ಪ್ರದೇಶ ಕೊಡಗಿನಲ್ಲಿ ಪಶುವೈದ್ಯಕೀಯ ಸೇವೆಗೆ ಹಿನ್ನಡೆ ಆಗಿದೆ. ಸಿಬ್ಬಂದಿ ಕೊರತೆ ಒಂದು ಕಡೆಯಾದರೆ, ಸರ್ಕಾರದ ಬಹಳಷ್ಟು ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬರುತ್ತಿಲ್ಲ. ಒಂದು ಪಾಲಿಕ್ಲಿನಿಕ್ ಸೇರಿ ಜಿಲ್ಲೆಯಲ್ಲಿ ೭೪ ವಿವಿಧ ಬಗೆಯ ಪಶುವೈದ್ಯಕೀಯ ಕೇಂದ್ರಗಳಿದ್ದರೂ ಸದ್ಬಳಕೆ ಆಗುತ್ತಿಲ್ಲ.
ಕೊಡಗು ಪಶುಸಂಗೋಪನಾ ಇಲಾಖೆಯಲ್ಲಿ ಒಟ್ಟು ೩೦೪ ಮಂಜೂರಾದ ಹುದ್ದೆಗಳಿವೆ. ಆದರೆ ಭರ್ತಿಯಾಗಿರುವುದು ಕೇವಲ ೭೭ ಹುದ್ದೆಗಳು. ಉಳಿದ ೨೨೭ ಹುದ್ದೆಗಳು ಖಾಲಿ ಉಳಿದಿವೆ. ೨೨ ಪಶುವೈದ್ಯಾಧಿಕಾರಿಗಳು ಇರಬೇಕಿದಲ್ಲಿ ೭ ಜನ ಮಾತ್ರ ಇದ್ದು ಉಳಿದ ೧೫ ಹುದ್ದೆಗಳು ಖಾಲಿ ಇದೆ. ೧೫ ಹಿರಿಯ ಪಶು ವೈದ್ಯಾಧಿಕಾರಿಗಳು ಇರಬೇಕಿದ್ದಲ್ಲಿ ೪ ಜನರು ಮಾತ್ರ ಇದ್ದು. ೧೧ ಹುದ್ದೆಗಳಲ್ಲಿ ಯಾರೂ ಇಲ್ಲ. ೭ ಮುಖ್ಯ ಪಶುವೈದ್ಯಾಧಿಕಾರಿಗಳು ಇರಬೇಕಿದ್ದಲ್ಲಿ ಕೇವಲ ಒಬ್ಬರು ಮಾತ್ರ ಇದ್ದಾರೆ.
೧೧೮ ಡಿ ದರ್ಜೆ ನೌಕರರ ಹುದ್ದೆಯಲ್ಲಿ ೯೬ ಹುದ್ದೆಗಳು ಖಾಲಿ ಇದೆ. ಬೆರಳಚ್ಚುಗಾರರು, ಎಕ್ಸರೇ ತಂತ್ರಜ್ಞರು ಒಬ್ಬರೂ ಇಲ್ಲ. ಆರ್ಥಿಕ ಮಿತಿ ಕಾರಣದಿಂದ ನೇರ ನೇಮಕಾತಿಗೆ ಅವಕಾಶ ಇಲ್ಲ ಎಂದು ಸÀರ್ಕಾರ ಈಗಾಗಲೇ ಸ್ಪಷ್ಟನೆ ನೀಡಿರುವುದರಿಂದ ಖಾಲಿ ಇರುವ ಹುದ್ದೆಗಳು ಸದ್ಯಕ್ಕಂತೂ ಭರ್ತಿಯಾಗುವ ಲಕ್ಷಣಗಳಿಲ್ಲ. ಜಾನುವಾರು ಅಭಿವೃದ್ಧಿ ಅಧಿಕಾರಿ, ಜಾನುವಾರು ಅಧಿಕಾರಿ, ಪಶುವೆದ್ಯಕೀಯ ಸಹಾಯಕರ ಹುದ್ದೆಗಳನ್ನು ಮುಂಬಡ್ತಿ ಮೂಲಕ ಇಲಾಖೆಯಲ್ಲಿ ಭರ್ತಿ ಮಾಡಿದ್ದರೂ ಕೊಡಗಿನಲ್ಲಿ ಈ ಹುದ್ದೆಗಳಿಗೆ ಯಾರೂ ಬರುತ್ತಿಲ್ಲ..
ಪಶು ವೈದ್ಯಕೀಯ ಇಲಾಖೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಕಾರಣದಿಂದ ಸರ್ಕಾರದ ವಿವಿಧ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ದೊರಕಲು ಅಡ್ಡಿ ಆಗಿದೆ. ಉಚಿತ ಜಾನುವಾರು ವಿಮಾ ಯೋಜನೆ, ಪಶುಭಾಗ್ಯ ಯೋಜನೆ, ಅಮೃತ ಯೋಜನೆ, ಗಿರಿರಾಜ ಕೋಳಿ ಮರಿಗಳ ವಿತರಣೆ ಕಾರ್ಯಕ್ರಮಗಳು ಸೇರಿದಂತೆ ಹಲವು ಯೋಜನೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲೂ ಸಾಧ್ಯವಾಗುತ್ತಿಲ್ಲ.
ಜಿಲ್ಲೆಯಲ್ಲಿ ೧ ಪಾಲಿ ಕ್ಲಿನಿಕ್, ೧೭ ಪಶು ಆಸ್ಪತ್ರೆ, ೨೨ ಪಶು ಚಿಕಿತ್ಸಾಲಯ, ೩೧ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಹಾಗೂ ಸಂಚಾರಿ ಪಶು ಚಿಕಿತ್ಸಾಲಯUಳೂ ಇದ್ದು, ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ಸಮರ್ಪಕ ಸೇವೆ ಸಿಗದಂತಾಗಿದೆ.

ಗ್ರಾಮೀಣ ಭಾಗದಲ್ಲಿರುವ ವೆಟರ್ನರಿ ಆಸ್ಪತ್ರೆಗಳಿಗೆ ವೈದ್ಯರ ಕೊರತೆಯಿಂದ ಗ್ರಾಮೀಣ ಭಾಗದಲ್ಲಿಯೂ ಹೈನುಗಾರಿಕೆ ಅವಸಾನದ ಅಂಚಿನಲ್ಲಿದೆ. ರೋಗಬಾಧೆಗೆ ತುತ್ತಾಗಿ ಬೆಲೆಬಾಳುವ ಹಸುಗಳು ಸತ್ತರೆ ರೈತ ದೊಡ್ಡ ಮಟ್ಟದ ನಷ್ಟ ಅನುಭವಿಸಬೇಕು. ಪ್ರತಿ ಆಸ್ಪತ್ರೆಗಳಿಗೂ ವೈದ್ಯರು ನೇಮಕವಾಗಲಿ. ಹೈನುಗಾರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳು ಸಿಗಬೇಕು.
ಜಯಂತಿ, ರೈತ ಮಹಿಳೆ, ಸೂರ್ಲಬ್ಬಿ ಗ್ರಾಮ

ಹೈನುಗಾರಿಕೆಗೂ ಕೊಡಗಿಗೂ ಅವಿನಾಭಾವ ಸಂಬAಧವಿದೆ. ಇವತ್ತು ಗ್ರಾಮೀಣ ಭಾಗದಲ್ಲಿ ಕೆಲ ರೈತರು ಹಸುಗಳನ್ನು ಸಾಕಿ, ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಆದರೆ ಲಾಭದಾಯಕವಾಗಿಲ್ಲ. ರೋಗಬಾಧೆ ಹೆಚ್ಚಿದೆ. ಪಶುವೈದ್ಯಕೀಯ ಇಲಾಖೆಯಿಂದ ಸಹಕಾರ, ಸೌಲಭ್ಯ ಸಿಗುತ್ತಿಲ್ಲ. ಹಸುಗಳನ್ನು ಪರೀಕ್ಷೆ ಮಾಡಿಸಲು ಲಂಚದ ರೂಪದಲ್ಲಿ ಹೆಚ್ಚಿನ ಹಣವನ್ನು ಕೊಡಬೇಕಾಗಿದೆ.
ಕೆ.ಎಸ್. ಹರೀಶ್, ಕೃಷಿಕ, ಕುಮಾರಳ್ಳಿ ಗ್ರಾಮ

ಪೊನ್ನಂಪೇಟೆ ತಾಲೂಕಿನಲ್ಲಿ ನಾಲ್ಕು ಜನ ಮತ್ತು ವಿರಾಜಪೇಟೆಯಲ್ಲಿ ಇಬ್ಬರು ಪಶುವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಎಲ್ಲಾ ರೈತರಿಗೂ ಸೇವೆ ಕೊಡಲು ಆಗುವುದಿಲ್ಲ. ಸರಿಯಾದ ಸೇವೆ ಸಿಕ್ಕದೆ ರೈತರು ಜಾನುವಾರಗಳನ್ನು ಮಾರುತ್ತಿದ್ದಾರೆ. ಈಗಾಗಲೇ ಇಬ್ಬರು ಶಾಸಕರಿಗೆ ಈ ಕುರಿತು ಮನವಿ ಮಾಡಿದ್ದೇವೆ. ಅವರೂ ಭರವಸೆ ನೀಡಿದ್ದಾರೆ.
ಆದಷ್ಟು ಬೇಗ ಖಾಲಿ ಇರುವ ಹುದ್ದೆಗೆ ನೇಮಕಾತಿ ಆದರೆ ಒಳ್ಳೆಯದು.
ಡಾ. ಎ.ಎಸ್. ಶಾಂತೇಶ್, ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ, ಪೊನ್ನಂಪೇಟೆ

ನಮ್ಮಲ್ಲಿ ಜಾನುವಾರುಗಳಿಗೆ ಏನಾದರು ಸಮಸ್ಯೆ ಆದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸುವುದು ಕಷ್ಟವಾಗಿದೆ. ಅವರು ನಮ್ಮಲ್ಲಿಗೆ ಬಂದು ತಲುಪುವಷ್ಟರಲ್ಲಿ ಸಮಸ್ಯೆ ಉಲ್ಬಣಿಸಿರುತ್ತದೆ. ಪ್ರತಿ ಸಲ ನಾವೇ ಜಾನುವಾರುಗಳನ್ನು ಅಲ್ಲಿಗೆ ಕರೆದುಕೊಂಡು ಹೋಗುವುದು ಆಗದ ಕೆಲಸ. ಸಿಬ್ಬಂದಿ ಹೆಚ್ಚಿದ್ದರೆ ನಮಗೂ ಅನುಕೂಲ.
ಚೆಪ್ಪುಡಿರ ರಾಧಾ ಅಚ್ಚಯ್ಯ, ಮಾಯಮುಡಿ

ಪಶುಪಾಲನಾ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ತೊಂದರೆ ಎದುರಿಸುವಂತಾಗಿದೆ. ಇರುವ ವೈದ್ಯರನ್ನು ಪಂಚಾಯತಿ ಸಭೆಗಳ ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡುತ್ತಾರೆ. ಇದರಿಂದ ಪಶು ಸಾಕಾಣೆದಾರರಿಗೆ ಸಮಯಕ್ಕೆ ಸರಿಯಾಗಿ ಇರುವ ವೈದ್ಯರು ಸಿಗುವುದಿಲ್ಲ,. ಅನೇಕ ರೈತರ ಗೋವುಗಳು ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿವೆ.
ಕೆ.ಟಿ. ಹರೀಶ್, ಕುಜಿಗೇರಿ, ದುಂಡಳ್ಳಿ

ಮಾಲ್ದಾರೆಯಲ್ಲಿ ಒಂದು ವರ್ಷದ ಹಿಂದೆ ಉದ್ಘಾಟನೆಗೊಂಡ ಹೊಸ ಚಿಕಿತ್ಸಾಲಯ ಕೇಂದ್ರಕ್ಕೆ ಇನ್ನೂ ವೈದ್ಯರು, ಸಿಬ್ಬಂದಿ ನೇಮಕವಾಗಿಲ್ಲ. ಈ ಭಾಗದ ಹೈನುಗಾರಿಕೆಗೆ ಹೊಸ ಆಸ್ಪತ್ರೆ ಪ್ರಯೋಜನಕ್ಕೆ ಬಾರದೆ ನಿರುಪಯುಕ್ತವಾಗಿದೆ.
ವೈದ್ಯರು ಮತ್ತು ಸಿಬ್ಬಂದಿ ನೇಮಿಸಬೇಕೆಂದು ಗ್ರಾಮ ಸಭೆಯಲ್ಲಿ ಆಗ್ರಹಿಸಿಸಲಾಗಿತ್ತು. ಈವರೆಗೂ ಯಾವುದೇ ಕೆಲಸವಾಗಿಲ್ಲ. ತುರ್ತು ಸಂದರ್ಭದಲ್ಲಿ ವೈದ್ಯರು, ಸಿಬ್ಬಂದಿ ಇಲ್ಲದೆ ಜಾನುವಾರುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ
ಚಮ್ಮಂಡ ಚಿಮ್ಮಿ, ಕಾಫಿ ಬೆಳೆಗಾರ, ಮಾಲ್ದಾರೆ

ಸರ್ಕಾರ ಹೈನುಗಾರಿಕೆಗೆ ಪ್ರೋತ್ಸಾಹ ನೀಡಬೇಕು. ಅದಕ್ಕೆ ಪೂರಕವಾದ ಪಶು ಇಲಾಖೆಗೆ ಬೇಕಾದ ವೈದ್ಯರನ್ನು ಮತ್ತು ಸಿಬ್ಬಂದಿ ನೇಮಕ ಮಾಡಿ ರೈತರಿಗೆ ನೆಮ್ಮದಿಯಾದ ವಾತಾವರಣ ನಿರ್ಮಾಣ ಮಾಡಿದರೆ ಸೂಕ್ತ. ಹೈನುಗಾರಿಕೆಗೆ ಮತ್ತಷ್ಟು ಆರ್ಥಿಕ ಸಹಕಾರ ನೀಡಿ, ಪ್ರೋತ್ಸಾಹಿಸಿದರೆ ಇನ್ನೂ ಹಲವು ರೈತರು ಸುಖವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ.
ಮಾದು, ರೈತ, ಮುಳ್ಳುಸೋಗೆ

ಸರ್ಕಾರಿ ಪಶುಚಿಕಿತ್ಸಾಲಯಗಳಲ್ಲಿ ವೈದ್ಯರ ಕೊರತೆ ಪಶುಪಾಲಕರಿಗೆ ದೊಡ್ಡ ನಷ್ಟ. ವನ್ಯಪ್ರಾಣಿಗಳ ಹಾವಳಿ ಮಧ್ಯೆ ಕೊಡಗಿನಲ್ಲಿ ಹೈನುಗಾರಿಕೆ ತುಂಬಾ ಕಷ್ಟ. ಇಂಥದರಲ್ಲಿ ಪಶು ವೈದ್ಯರು ಮತ್ತು ಸಿಬ್ಬಂದಿ ಇಲ್ಲದಿರುವುದು ಪಶುಪಾಲನೆಗೆ ಹಿನ್ನಡೆ ಆಗಿದೆ. ಎಲ್ಲಾ ಕಡೆಗಳಲ್ಲಿ ಪಶು ವೈದ್ಯಕೀಯ ಆಸ್ಪತ್ರೆಗಳಿವೆ. ಇಲ್ಲಿಗೆ ಆದಷ್ಟು ಬೇಗ ವೈದ್ಯರು ಮತ್ತು ಸಿಬ್ಬಂದಿ ನೇಮಕ ಆಗಲಿ.
ಮಹೇಶ್, ರೈತ, ಬಸವನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net