

ಬೆಳಗಾವಿ: ನಗರದ ಜನನಿಬಿಡ ಪ್ರದೇಶವಾದ ಕಾಲೇಜು ರಸ್ತೆಯ ಸನ್ಮಾನ ಹೋಟೆಲ್ ಎದುರಿನ ಲಿಂಗರಾಜ್ ವೃತ್ತದ ರಸ್ತೆ ಮಧ್ಯೆ ಸಂಚಾರಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದು, ಸಂಚಾರಕ್ಕೆ ಸಂಚಕಾರ ತರುವಂತಿದೆ.
ಕಾಲೇಜು ರಸ್ತೆಯ ಸುತ್ತಲಿನ ಪ್ರದೇಶದಲ್ಲಿ ಬಹಳಷ್ಟು ವಿದ್ಯಾ ಸಂಸ್ಥೆಗಳಿದ್ದು, ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಆಸ್ಪತ್ರೆಗಳಿಗೆ ತೆರಳುವವರಿಗೆ ಬ್ಯಾರಿಕೇಡ್ ಹಾಕಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಪೊಲೀಸರು ಅಳವಡಿಸಿರುವ ಬ್ಯಾರಿಕೇಡ್ ಅಂಚಿನ ರಸ್ತೆ ಡಿವೈಡರ್ ಸಂದಿ ಮೂಲಕ ವಿದ್ಯಾರ್ಥಿಗಳು ರಸ್ತೆ ದಾಟಿ ಶಾಲೆ-ಕಾಲೇಜುಗಳಿಗೆ ತೆರಳುತ್ತಿದ್ದು, ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವಂತಹ ಪರಿಸ್ಥಿತಿ ಈಗ ಎದುರಾಗಿದೆ.
ಲಿಂಗರಾಜ ಕಾಲೇಜು, ಜಿ.ಐ. ಹೈಸ್ಕೂಲ್, ಆರ್.ಎಲ್. ಪಿಯು ಕಾಲೇಜು, ಮಹಿಳಾ ವಿದ್ಯಾಲಯ, ಸರ್ಕಾರಿ ಸರ್ದಾರ ಹೈಸ್ಕೂಲ್ ಮತ್ತು ಕಾಲೇಜು, ಉರ್ದು ಶಾಲೆ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಬೆಳಗ್ಗೆ ಶಾಲೆ-ಕಾಲೇಜಿಗೆ ಹೋಗುವಾಗ ಹಾಗೂ ಸಂಜೆ ಮನೆಗೆ ತೆರಳುವಾಗ ಬಹಳಷ್ಟು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಜಮಾಯಿಸುತ್ತಾರೆ. ರಸ್ತೆಯ ಎರಡೂ ಕಡೆ ದಾಟಿ ಹೋಗುವಾಗ ಬ್ಯಾರಿಕೇಡ್‌ಗಳು ಅಡ್ಡಿಯಾಗುತ್ತಿವೆ. ಇದರ ಮಧ್ಯೆ ಮೂರು ದಿಕ್ಕುಗಳಿಂದ ಬರುವ ವಾಹನಗಳ ಮೇಲೆ ತೀವ್ರ ನಿಗಾ ವಹಿಸುತ್ತ ಸಾಗಬೇಕು. ದೃಷ್ಟಿ ಸ್ವಲ್ಪ ಬೇರೆ ಹೋದರೆ ಅಪಘಾತ ಕಟ್ಟಿಟ್ಟ ಬುತ್ತಿ. ಹೀಗಾಗಿ ರಸ್ತೆಯ ಮಧ್ಯೆ ಅಳವಡಿಸಿರುವ ಬ್ಯಾರಿಕೇಡ್‌ಗಳನ್ನು ತೆರವು ಮಾಡಬೇಕು ಅಥವಾ ವಿದ್ಯಾರ್ಥಿಗಳು ದಾಟುವುದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಸಮರ್ಪಕವಾಗಿ ಪೊಲೀಸರು ಇರಲ್ಲ:
ಸನ್ಮಾನ ಹೋಟೆಲ್ ಎದುರಿನ ಲಿಂಗರಾಜ ವೃತ್ತದಲ್ಲಿ ಸಂಚಾರಿ ಪೊಲೀಸರು ಸಮರ್ಪಕವಾಗಿ ಕರ್ತವ್ಯಕ್ಕೆ ಇರುತ್ತಿರಲಿಲ್ಲ. ಹೀಗಾಗಿ ಎರಡೂ ಬದಿಯ ಒನ್ ವೇ ರಸ್ತೆ ದಾಟುವಾಗ ಸಂಚಾರ ದಟ್ಟನೆಯಾಗುತ್ತಿತ್ತು. ಹೀಗಾಗಿ ರಸ್ತೆಯ ಮಧ್ಯೆ ಬ್ಯಾರಿಕೇಡ್ ಅಳವಡಿಸಿ ಟ್ರಾಫಿಕ್ ಕಿರಿ ಕಿರಿ ಕಡಿಮೆ ಮಾಡುತ್ತಿದ್ದೇವೆಂದು ಸಂಚಾರಿ ಪೊಲೀಸರು ಹೇಳುತ್ತಾರೆ. ಆದರೆ, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಎರಡೂ ಬದಿಯ ರಸ್ತೆ ದಾಟಿ ಸಂಚರಿಸುವುದು ದುಸ್ತರವಾಗಿದೆ. ಬ್ಯಾರಿಕೇಡ್ ತೆರವುಗಳಿಸುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿದೆ.
ಪ್ರತಿಕ್ರಿಯೆ: ರಾಂಗ್ ರೂಟ್‌ನಲ್ಲಿ ವಾಹನ ಸವಾರರು ರಸ್ತೆ ದಾಟುತ್ತಿದ್ದರಿಂದ ಸಂಚಾರ ದಟ್ಟನೆಯಾಗುತ್ತಿತ್ತು. ಹೀಗಾಗಿ ಬ್ಯಾರಿಕೇಡ್ ಅಳವಡಿಸಿದ್ದೇವೆ. ಜನರಿಗೆ ರಸ್ತೆ ದಾಟುವುದಕ್ಕೆ ಬ್ಯಾರಿಕೇಡ್ ಪಕ್ಕದಲ್ಲಿ ದಾರಿ ಇದೆ. ಮಳೆಗಾಲ ಮುಗಿಯುವವರೆಗೆ ಆದರೂ ಬ್ಯಾರಿಕೇಡ್ ಇರಲಿವೆ ಎಂದು ದಕ್ಷಿಣ ಸಂಚಾರ ಠಾಣೆ ಇನ್ಸ್ ಸ್ಪೆಕ್ಟರ್ ವಿನಾಯಕ ಬಡಿಗೇರ ಪ್ರತಿಕ್ರಿಯೆ ನೀಡಿದ್ದಾರೆ.