

ಕಿರುವಾರ ಎಸ್.ಸುದರ್ಶನ್ ಕೋಲಾರ: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಬಯಲಿಗೆಳೆದಿದ್ದ ಬೋನೈಡ್ ಹಗರಣಕ್ಕೆ ಸಂಬಂಧಿಸಿದಂತೆ ಟ್ರ್ಯಾಕ್ಟರ್ ಮಾಲೀಕರಿಗೀಗ ಸಂಕಷ್ಟ ಶುರುವಾಗಿದೆ. ಕೋಲಾರ ತಾಲೂಕಿನ ನರಸಾಪುರ ನಾಡಕಚೇರಿಯಿಂದ ಕೊಟ್ಟಿರುವ ಬೋನೈಡ್ ಸರ್ಟಿಫಿಕೇಟ್ಗಳ ಆಧಾರದಲ್ಲಿ ಟ್ರಾ$್ಯಕ್ಟರ್ ನೋಂದಣಿ ಮಾಡಿಸಿರುವ ಮಾಲೀಕರ ಪಟ್ಟಿ ಸಿದ್ದಪಡಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದು, ಹಲವರಲ್ಲಿ ಬಂಧನ ಭೀತಿ ಶುರುವಾಗಿದೆ.
ನರಸಾಪುರ ಹೋಬಳಿ ನಾಡಕಚೇರಿಯಲ್ಲಿ ನಕಲಿ ರೈತರಿಗೆ ಬೋನೈಡ್ ಸರ್ಟಿಫಿಕೇಟ್ಗಳನ್ನು ವಿತರಿಸಿರುವ ಬಗ್ಗೆ 2023 ಮೇ 18ರಂದು "ನಕಲಿ ರೈತರಿಗೆ ಬೋನೈಡ್ ಸರ್ಟಿಫಿಕೇಟ್' ಶೀರ್ಷಿಕೆಯಡಿ ವಿಜಯವಾಣಿ ಮುಖಪುಟದಲ್ಲಿ ಪ್ರಕಟಿಸಿದ್ದ ವಿಶೇಷ ವರದಿಯನ್ನು ಆಧರಿಸಿ ಉಪ ಲೋಕಾಯುಕ್ತ ಕೆ.ಎನ್.ಣೀಂದ್ರ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ತನಿಖೆ ಆದೇಶಿಸಿದ್ದರು. ಕೋಲಾರ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಿದ ತಂಡ ಅಂತಿಮ ವರದಿಯನ್ನು ಕೋರ್ಟ್ಗೆ ದಾಖಲಿಸಿತ್ತು. ಇದೀಗ ತನಿಖೆಯ ಮುಂದುವರಿದ ಭಾಗವಾಗಿ ಟ್ರಾ$್ಯಕ್ಟರ್ ಮಾಲೀಕರ ವಿಚಾರಣೆ ಆರಂಭವಾಗಿದೆ.
ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಸೆನ್ 7(2) ಮತ್ತು 9(ಎ) ಪ್ರಕಾರ ನರಸಾಪುರ ನಾಡಕಚೇರಿ ಡೆಪ್ಯುಟಿ ತಹಶೀಲ್ದಾರ್, ಕಂಪ್ಯೂಟರ್ ಆಪರೇಟರ್, ಕೋಲಾರ ತಾಲೂಕು ತಹಶೀಲ್ದಾರ್ ಹಾಗೂ ಕೋಲಾರ ಪ್ರಾದೇಶಿಕ ಸಾರಿಗೆ ಕಚೇರಿ ಎಆರ್ಟಿಒ ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿತ್ತು. ಕೋಲಾರ ಜಿಲ್ಲೆ ಗರುಡಪಾಳ್ಯದಲ್ಲಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಜಮೀನುಗಳ ಸರ್ವೇ ನಂಬರ್ ಬಳಸಿಯೂ ಬೇರೆಬೇರೆ ವ್ಯಕ್ತಿಗಳಿಗೆ ನಕಲಿ ಬೋನೈಡ್ ಸರ್ಟಿಫಿಕೇಟ್ಗಳನ್ನು ವಿತರಣೆ ಮಾಡಲಾಗಿದೆ.
ವಂಚನೆ ಹೇಗೆ?
- ಮೂಲ ಮಾಲೀಕರ ಹೆಸರಲ್ಲಿರುವ ಜಮೀನಿಗೆ ಬೇರೆ ವ್ಯಕ್ತಿ ಹೆಸರಿನಲ್ಲಿ ಬೋನೈಡ್ ಪತ್ರ ಸೃಷ್ಟಿ.
- ಕೆಲ ಗ್ರಾಮಗಳಲ್ಲಿರುವ ಸರ್ಕಾರಿ ಖರಾಬ್ ಭೂಮಿಯ ಹೆಸರಿಗೂ ಪ್ರಮಾಣ ಪತ್ರ ಕೊಡಲಾಗಿದೆ.
- ತಲಾ ನಕಲಿ ದೃಢೀಕರಣ ಪತ್ರಕ್ಕೆ ಇಂತಿಷ್ಟು ಲಂಚ ಪಡೆದು ಮಾಡಿಕೊಟ್ಟ ನಾಡಕಚೇರಿ ಸಿಬ್ಬಂದಿ.
- ಬೆಂ.ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ವ್ಯಕ್ತಿಗಳ ಹೆಸರಿಗೆ ಪತ್ರ ವಿತರಣೆ.
- ನಕಲಿ ಪತ್ರಗಳನ್ನು ಸಲ್ಲಿಸುವ ಮೂಲಕ ಕೃಷಿಕ ಎಂದು ಬಿಂಬಿಸಿಕೊಂಡು ವಾಹನಗಳ ನೋಂದಣಿ.
ಕೋಲಾರದಲ್ಲೂ ದಂಧೆ ವ್ಯಾಪಕ
ತುಮಕೂರಿನಲ್ಲಿ ಬೋನೋೈಡ್ ಸರ್ಟಿಫಿಕೇಟ್ ದಂಧೆ ಬೆಳಕಿಗೆ ಬರುತ್ತಿದ್ದಂತೆ, ಲೋಕಾಯುಕ್ತ ಪೊಲೀಸರು ಆರ್ಟಿಒ ಕಚೇರಿ ಮೇಲೆ ದಾಳಿ ಮಾಡಿ, ಪರಿಶೀಲಿಸಿದರು. ಆಗ ಸುಮಾರು ನಕಲಿ ಬೋನೋೈಡ್ ಸರ್ಟಿೇಕೇಟ್ಗಳು ಪತ್ತೆಯಾಗಿದ್ದವು. ಇದನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು, ಆರೋಪ ಇರುವ ಆರ್ಟಿಒ ಕಚೇರಿಗಳ ಮೇಲೂ ದಾಳಿ ನಡೆಸಿದರು. ಇದು ಜಿಲ್ಲೆಯಲ್ಲೂ ಸಹ ವ್ಯಾಪಕವಾಗಿ ನಡೆದಿದ್ದು, ಜಿಲ್ಲಾ ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪರಿಶೀಲಿಸದೆ ವಿತರಣೆ
ನಾಡ ಕಚೇರಿಗಳಲ್ಲಿ ಬೋನೋೈಡ್ ಸರ್ಟಿಫಿಕೇಟ್ಗಳನ್ನು ವಿತರಣೆ ಮಾಡಲಾಗುತ್ತಿದ್ದು, ಉಪ ತಹಸೀಲ್ದಾರ್ ಮತ್ತು ಕಂಪ್ಯೂಟರ್ ಆಪರೇಟ್ಗಳು ನಕಲಿ ಪ್ರಮಾಣ ಪತ್ರ ನೀಡುತ್ತಾರೆ. ಪ್ರಮಾಣ ಪತ್ರ ನೀಡಬೇಕಾದರೆ ಪಹಣಿ, ಆಧಾರ್ ಕಾರ್ಡ್, ಟ್ರ್ಯಾಕ್ಟರ್ ದಾಖಲೆಗಳು ತಾಳೆ ಆಗುತ್ತಿವೆಯೇ ಎಂಬುದು ಸೇರಿ ಹಲವು ನಿಯಮ ಪಾಲಿಸಬೇಕು. ಇದ್ಯಾವುದನ್ನು ಮಾಡದೆ ಅರ್ಜಿದಾರ ಸಲ್ಲಿಸುವ ದಾಖಲೆಗಳನ್ನೇ ಇಟ್ಟುಕೊಂಡು ಪ್ರಮಾಣ ಪತ್ರ ವಿತರಿಸಲಾಗುತ್ತಿದೆ.
ಇನ್ನು ಆರ್ಟಿಒ ಕಚೇರಿಗಳಲ್ಲೂ ಸಹ ದಾಖಲೆ ಪರಿಶೀಲನೆ ಮಾಡದೆ ನಕಲಿ ಸರ್ಟಿಫಿಕೇಟ್ ಮೇಲೆಯೇ ವಾಹನ ನೋಂದಣಿ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
17ರಂದು ವಿಚಾರಣೆ
ನರಸಾಪುರ ನಾಡಕಚೇರಿ ಉಪ ತಹಸೀಲ್ದಾರ್ ಮತ್ತು ಕಂಪ್ಯೂಟರ್ ಆಪರೇಟರ್ ಮತ್ತು ಇತರರ ವಿರುದ್ಧ ಕೋಲಾರ ಲೋಕಾಯುಕ್ತ ಠಾಣೆಯಲ್ಲಿ ಕಲಂ 7(ಎ), 7(ಎ), 11(1)(ಎ) ಆರ್/ಡಬ್ಲ್ಯೂ 13(12) ಪಿ.ಸಿ (ತಿದ್ದುಪಡಿ0 ಆಕ್ಟ್ 1988 ಮತ್ತು 120(ಬಿ), 420, 465, 468, 471 ಐಪಿಸಿ ಪ್ರಕರಣದ ತನಿಖೆಯಲ್ಲಿ ವಿಚಾರಣೆ ಅವಶ್ಯವಿದ್ದು, ಫೆ.17ರಂದು ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ಉಪಾಧೀಕ್ಷಕ ಯಶವಂತ್ ನೊಟೀಸ್ ನೀಡಿದ್ದಾರೆ.