

ಬೈಲಹೊಂಗಲ: ಸಾಧನೆಗೆ ಬಡತನ ಅಡ್ಡಿಯಲ್ಲ, ಸಾಧಿಸುವ ಛಲ, ಆತ್ಮವಿಶ್ವಾಸವಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದು ಸಾಧಿಸಿ ತೋರಿಸಿದ್ದಾರೆ ಉದ್ಯಮಿ ಸಿದ್ದರಾಮ ಲಿಂಗಶೆಟ್ಟಿ. ಬೈಲಹೊಂಗಲ ತಾಲೂಕಿನ ಹಿರೇಕೊಪ್ಪ ಗ್ರಾಮದ ಕೂಲಿ ಕಾರ್ಮಿಕ ಕುಟುಂಬ ವೊಂದರಲ್ಲಿ 1968ರಲ್ಲಿ ಜನಿಸಿದ ಸಿದ್ದರಾಮ ಲಿಂಗಶೆಟ್ಟಿ ಬಡತನದಲ್ಲಿಯೇ ಬಾಲ್ಯ ಕಳೆದವರು. 15ನೇ ವಯಸ್ಸಿನಲ್ಲಿಯೇ ಕುಟುಂಬ ನಿರ್ವಹಣೆ ಜವಾಬ್ದಾರಿ ಹೊತ್ತು ಗೋವಾ, ಮಂಗಳೂರು, ಹುಬ್ಬಳ್ಳಿ, ಬೆಂಗಳೂರು ಸೇರಿ ವಿವಿಧ ಮಹಾನಗರಗಳಲ್ಲಿ ಸೇಲ್ಸ್‌ಮನ್, ಕಟ್ಟಡ ಕಾರ್ಮಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದರು. ಕೆಲವರಿಗಾದರೂ ಉದ್ಯೋಗ ನೀಡಬೇಕು ಎನ್ನುವ ಕನಸೇ ಜೀವನದ ಕಷ್ಟದ ಸಾಗರ ಈಜಿ ಸಾಧನೆ ದಡ ಸೇರಲು ಅವರಿಗೆ ಪ್ರೇರಣೆ ನೀಡಿತ್ತು.
ಬಡತನದಲ್ಲಿ ಹುಟ್ಟುವುದು ತಪ್ಪಲ್ಲ. ಆದರೆ, ಅದನ್ನು ಮೀರದಿದ್ದರೆ ಬದುಕಿನಲ್ಲಿ ಸೋತಂತೆ. ಹಾಗಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂಬುದೇ ಅವರ ಜೀವನದ ಗುರಿಯಾಗಿತ್ತು. ಛಲದಂಕ ಮಲ್ಲನಂತೆ ಅತ್ಯದ್ಭುತ ಯಶಸ್ಸು ಸಾಧಿಸಿದ ಪಟ್ಟಿಯಲ್ಲಿ ಲಿಂಗಶೆಟ್ಟಿ ಒಬ್ಬರಾಗಿ ನಿಲ್ಲುತ್ತಾರೆ.
ಉದ್ಯಮ ಸ್ಥಾಪನೆ, ವಿಸ್ತರಣೆಯೇ ರೋಚಕ: ಕೇವಲ 20 ವರ್ಷಗಳಲ್ಲಿ ಶ್ರೀ ಬಸವೇಶ್ವರ ಟ್ರೇಡರ್ಸ್ ಹೆಮ್ಮರವಾಗಿ ಬೆಳೆಯಲು ಸಿದ್ದರಾಮ ಲಿಂಗಶೆಟ್ಟಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹಗಲು-ರಾತ್ರಿ ಎನ್ನದೇ ಕಾಲಿಗೆ ಚಕ್ರಕಟ್ಟಿಕೊಂಡು ಊರೂರು ಸುತ್ತಿ ತಮ್ಮ ಉದ್ಯಮ ಬೆಳೆಸಿದ್ದಾರೆ. ಅವರ ಜೀವನಾನುಭವನ್ನು ಅವರ ಮಾತುಗಳಲ್ಲೇ ಕೇಳೋಣ....
ನಾನು ಮೂಲತಃ ಬೈಲಹೊಂಗಲ ತಾಲೂಕಿನ ನಾಗನೂರ ಗ್ರಾಮದವನು. ತಂದೆ ಮಲ್ಲಪ್ಪ ಲಿಂಗಶೆಟ್ಟಿ, ತಾಯಿ ಈರವ್ವ ಲಿಂಗಶೆಟ್ಟಿ. ಕೂಲಿ ಕೆಲಸ ಮಾಡಿ ನಮ್ಮನ್ನು ಬೆಳೆಸಿದ್ದಾರೆ. ಬಡತನದಲ್ಲಿಯೇ 7ನೇ ತರಗತಿವರೆಗೆ ಗ್ರಾಮದಲ್ಲಿ ಶಿಕ್ಷಣ ಮುಗಿಸಿದೆ. ಬಳಿಕ ಇಂಚಲದ ಶ್ರೀ ಶಿವಾನಂದ ಭಾರತಿ ಮಠದಲ್ಲಿ 10ನೇ ತರಗತಿ ಅಭ್ಯಾಸ ಮಾಡಿದೆ. ಕೆಆರ್‌ಸಿಇಎಸ್ ಕಾಲೇಜಿಲ್ಲಿ ಪಿಯುಸಿ ಪ್ರವೇಶ ಪಡೆದೆ. ಆದರೆ, ಬಡತನದಿಂದಾಗಿ ಶಿಕ್ಷಣ ಮೊಟಕುಗೊಳಿಸಿ ಕೂಲಿ ಕೆಲಸ ಮಾಡಲು ಆರಂಭಿಸಿದೆ. ಬಳಿಕ ಉದ್ಯೋಗಕ್ಕಾಗಿ ಹುಬ್ಬಳ್ಳಿ, ಮಂಗಳೂರು, ಬೆಂಗಳೂರು, ಗೋವಾ ವಲಸೆ ಹೋಗಿ ಕಟ್ಟಡ ಕಾರ್ಮಿಕನಾದೆೆ. ಈ ಅನುಭವದ ಮೇಲೆ ಮನೆ ಮನೆಗೆ ತೆರಳಿ ಆಂಧ್ರ ಪ್ರದೇಶದ ಕಡಪಾ ಟೈಲ್ಸ್ ಕಲ್ಲು ಮಾರಾಟ ಆರಂಭಿಸಿದೆ. ಆರಂಭದಲ್ಲಿ ಸಾಕಷ್ಟು ಸವಾಲು ಎದುರಿಸಿದೆ.
ಹೋಲ್‌ಸೇಲ್ ದರದಲ್ಲೇ ಗ್ರಾಹಕರಿಗೆ ಗುಣಮಟ್ಟದ ಸಾಮಗ್ರಿ ಪೂರೈಸಲು ಆರಂಭಿಸಿದ್ದು, ನನ್ನ ಬದುಕಿಗೆ ಮತ್ತು ವ್ಯಾಪಾರಕ್ಕೆ ಹೊಸ ದಾರಿ ಮಾಡಿಕೊಟ್ಟಿತ್ತು. ಶ್ರೀಬಸವೇಶ್ವರ ಟ್ರೇಡರ್ಸ್ ಅಂಗಡಿ ಸ್ವಲ್ಪ ದಿನಗಳಲ್ಲಿಯೇ ಹೆಚ್ಚು ಪ್ರಸಿದ್ಧವಾಯಿತು. ಕಟ್ಟಡ ಕಾರ್ಮಿಕರು, ಇಂಜಿನಿಯರ್‌ಗಳಿಗೆ ಅವಶ್ಯ ಸಾಮಗ್ರಿ ಸ್ಥಳದಲ್ಲಿಯೇ ಮುಟ್ಟಿಸಿದ್ದು, ನಮ್ಮ ಉದ್ಯಮ ಇಷ್ಟೊಂದು ಎತ್ತರಕ್ಕೆ ಬೆಳೆಯಲು ಮುಖ್ಯ ಕಾರಣ ಎಂದು ಮನದಾಳ ಬಿಚ್ಚಿಟ್ಟರು.
ಬಡತನದಲ್ಲಿಯೇ ಬಾಲ್ಯ ಕಳೆದು ಬದುಕಿನ ಪಾಠ ಕಲಿತ ನಾನು, ಇಷ್ಟೊಂದು ದೊಡ್ಡ ಉದ್ಯಮ ಕಟ್ಟಲು ಹಗಲು, ರಾತ್ರಿ ಶ್ರಮಪಟ್ಟಿದ್ದೇನೆ. ಹಾಗಂತ ನಡೆದು ಬಂದ ದಾರಿ, ಜನರ ಸಹಕಾರ ಎಂದಿಗೂ ಮರೆಯಲ್ಲ. ಲಕ್ಷಾಂತರ ಜನರ ನಂಬಿಕೆ ಉಳಿಸಿಕೊಂಡು ಬದುಕುತ್ತಿದ್ದೇನೆ. ನಿಯತ್ತಿನಿಂದ ಕಟ್ಟಿದ ಉದ್ಯಮ ಶಾಶ್ವತವಾಗಿ ಉಳಿಯಲಿದೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ಉದ್ಯಮದ ಹೊರತಾಗಿ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಸೇವಾ ಕ್ಷೇತ್ರದಲ್ಲಿಯೇ ಹೆಚ್ಚು ತೊಡಗಿಸಿಕೊಳ್ಳಲು ಸಂಕಲ್ಪ ಮಾಡಿದ್ದೇನೆ ಎನ್ನುತ್ತಾರೆ ಸಿದ್ದರಾಮ.
ಗ್ರಾಹಕರ ವಿಶ್ವಾಸಾರ್ಹತೆ, ಗುಣಮಟ್ಟ ಹಾಗೂ ಉತ್ಕೃಷ್ಟ ದರ್ಜೆಯ ಕಟ್ಟಡ ಸಾಮಗ್ರಿ, ಇಲೆಕ್ಟ್ರಿಕಲ್ಸ್ ವಸ್ತುಗಳು, ಪೈಪ್ಸ್ ಹೀಗೆ ವಿವಿಧ ವಸ್ತುಗಳ ಸಂಗ್ರಹದ ಮೂಲಕವೇ ಬೈಲಹೊಂಗಲ ನಗರದಲ್ಲಿ ಶ್ರೀಬಸವೇಶ್ವರ ಟ್ರೇಡರ್ಸ್ ವರ್ಷದಿಂದ ವರ್ಷಕ್ಕೆ ತನ್ನ ಜನಪ್ರಿಯತೆ ಇಮ್ಮಡಿಗೊಳಿಸುತ್ತಿದೆ. ಅಲ್ಲದೆ, ನಿರ್ಮಾಣ ಕ್ಷೇತ್ರದಲ್ಲಿ
ಉತ್ತರ ಕರ್ನಾಟಕದಲ್ಲಿ ವಿಶೇಷ ಛಾಪು ಮೂಡಿಸಿದೆ. ಆರ್ಥಿಕ ಲಾಭಕ್ಕಿಂತ ಗ್ರಾಹಕರ ವಿಶ್ವಾಸಾರ್ಹತೆಗೆ ಹೆಚ್ಚು ಒತ್ತು ನೀಡಿರುವ ‘ಬಸವೇಶ್ವರ ಟ್ರೇಡಸ್’ ದಶಕಗಳಿಂದಲೂ ಉತ್ಪನ್ನಗಳ ಗುಣಮಟ್ಟ ಕಾಪಾಡಿಕೊಂಡು ಲಕ್ಷಾಂತರ ಗ್ರಾಹಕರ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗಿದೆ. ಕೇವಲ ಬೆಳಗಾವಿ ಜಿಲ್ಲೆಯ ಜನರಷ್ಟೇ ಅಲ್ಲ, ನೆರೆಯ ಧಾರವಾಡ, ಗದಗ, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಕಲಬುರಗಿ ಸೇರಿ ವಿವಿಧ ಜಿಲ್ಲೆಗಳಿಂದಲೂ ಸಾವಿರಾರು ಗ್ರಾಹಕರು ಇಲ್ಲಿಗೆ ಬಂದು ಖರೀದಿ ಮಾಡುತ್ತಿದ್ದಾರೆ. ಇದು ಅವರ ಪ್ರಾಮಾಣಿಕತೆ, ಪಾರದರ್ಶಕತೆಗೆ ಹಿಡಿದ ಕೈಗನ್ನಡಿಯಾಗಿದೆ.
ಇಂದು ಸಿದ್ದರಾಮ ಲಿಂಗಶೆಟ್ಟಿ ಏನಾದರೂ ಸಾಧನೆ ಮಾಡಿದ್ದಾನೆ ಎಂದರೆ ಅದಕ್ಕೆ ಮೂಲಕಾರಣ ಸವದತ್ತಿ ತಾಲೂಕಿನ ತಲ್ಲೂರ ಗ್ರಾಮದ ಉಪ್ಪಿನ ಸಾಹುಕಾರ ಕುಟುಂಬ. ಅವತ್ತು ಯರಗಟ್ಟಿ ಪಟ್ಟಣದಲ್ಲಿ ಶ್ರೀಬಸವೇಶ್ವರ ಟ್ರೇಡರ್ಸ್ ಆರಂಭಿಸಲು ಸಹಕಾರ ನೀಡದಿದ್ದರೆ ಉದ್ಯಮಿಯಾಗಿ ಬೆಳೆಯುತ್ತಿರಲಿಲ್ಲ. ಮೂರುಸಾವಿರ ಮಠದ ಸ್ವಾಮೀಜಿ ಆಶೀರ್ವಾದ ಜತೆಗೆ ದೊಡ್ಡ ದೊಡ್ಡ ಕೆಲಸ ಮಾಡಲು ಅವಕಾಶ ಕಲ್ಪಿಸಿದರು. ನನ್ನನ್ನು ಬೆಂಬಲಿಸಿ ಕೈಹಿಡಿದು ಬೆಳೆಸಿದವರ ಋಣ ತೀರಿಸಲು ನಿರಂತರವಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎನ್ನುತ್ತಾರೆ ಸಿದ್ದರಾಮ ಲಿಂಗಶೆಟ್ಟಿ.
ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬೆಳೆದಿದ್ದೇನೆ. ಜತೆಗೆ ಗಳಿಸಿದ್ದೇನೆ. ಆದರೆ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ನಿಸ್ವಾರ್ಥ ಸೇವೆಯಿಂದ ಜೀವನದಲ್ಲಿ ನೆಮ್ಮದಿ, ಸುಖ ಸಿಕ್ಕಿದೆ. ಗಳಿಕೆಯ ಒಂದು ಭಾಗ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದೇನೆ. ಬೈಲಹೊಂಗಲ ಅನ್ನಪೂರ್ಣೇಶ್ವರಿ ದೇವಿ ಹಾಗೂ ದುರ್ಗಾದೇವಿಯ ಪರಮಭಕ್ತರಾಗಿ ಅಲ್ಲಿನ ಧಾರ್ಮಿಕ ಅಭಿವೃದ್ಧಿ ಕೆಲಸಗಳಿಗೆ ಕೈಜೋಡಿಸುತ್ತಿದ್ದಾರೆ. ಕರೊನಾ ಸಂದರ್ಭದಲ್ಲಿ ಸೇವೆಯಲ್ಲಿದ್ದ ಆರೋಗ್ಯ ಸಿಬ್ಬಂದಿ, ಪೊಲೀಸರು ಹಾಗೂ ರೋಗಿಗಳಿಗೆ ಉಪಾಹಾರ, ಪೊಲೀಸರಿಗೆ ಗುಣಮಟ್ಟದ ಹಬೆ ಪಡೆಯುವ ಪ್ಲಾಸ್ಕ್ ಸಹ ವಿತರಿಸಿದ್ದು, ಅವರ ಮಾನವೀಯ ಕಳಕಳಿ ಎತ್ತಿ ತೋರಿಸುತ್ತದೆ.
ಪ್ರಾಮಾಣಿಕ ಸೇವೆಯೇ ನಮ್ಮ ಯಶಸ್ಸಿನ ಗುಟ್ಟು. ಉದ್ಯಮಿ ಸಿದ್ದರಾಮ ಲಿಂಗಶೆಟ್ಟಿ ಅವರಿಗೆ ಬಡತನವೇ ಬದುಕಿನ ಪಾಠ ಕಲಿಸಿದೆ. ಅಂದು ಕೂಲಿ ಕೆಲಸಕ್ಕಾಗಿ ಅಲೆದಾಡುತ್ತ್ತಿದ್ದ ನಾನೀಗ ಉದ್ಯಮಿಯಾಗಿ 15 ರಿಂದ 20 ಕುಟುಂಬಗಳಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆದಿದ್ದೇನೆ. ಗುರಿ ತಲುಪಲು ಶ್ರದ್ಧೆ ಮತ್ತು ಶ್ರಮ ಬೇಕು ಎಂದು ನಂಬಿದ್ದೇನೆ. ಹಾಗಾಗಿ ಸಿಕ್ಕ ಅವಕಾಶ ಬಳಸಿಕೊಂಡು ಯಶಸ್ಸು ಸಾಧಿಸಿದ್ದೇನೆ ಎನ್ನುತ್ತಾರೆ ಸಿದ್ದರಾಮ.
ಕಟ್ಟಡ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿದ ಅನುಭವ, ಗ್ರಾನೈಟ್, ಟೈಲ್ಸ್ ಮಾರಾಟದ ವ್ಯವಹಾರ ಜ್ಞಾನದಿಂದ ಸಿದ್ದರಾಮ ಲಿಂಗಶೆಟ್ಟಿ ಅವರು ಸವದತ್ತಿ ತಾಲೂಕಿನ ಯರಗಟ್ಟಿ ಪಟ್ಟಣದಲ್ಲಿ 2006ರಲ್ಲಿ ಶ್ರೀಬಸವೇಶ್ವರ ಟ್ರೇಡರ್ಸ್ ಆರಂಭಿಸಿದರು. ನಂತರ ಸ್ಥಳದ ಅಭಾವದಿಂದಾಗಿ 2008ರಲ್ಲಿ ಬೈಲಹೊಂಗಲ ಪಟ್ಟಣದ ಹಳೇ ಆರ್‌ಟಿಒ ಕಚೇರಿ ಬಳಿ ವ್ಯಾಪಾರ ವಹಿವಾಟು ಸ್ಥಳಾಂತರ ಮಾಡಿದರು. ಆರಂಭದಲ್ಲಿ ಮನೆಮನೆಗೆ ತೆರಳಿ ಕಟ್ಟಡ ಸಾಮಗ್ರಿ ಮುಟ್ಟಿಸುತ್ತ ಗ್ರಾಹಕರ ನಂಬಿಕೆ, ವಿಶ್ವಾಸ ಗಳಿಸಿ ವ್ಯಾಪಾರ ವಹಿವಾಟು ಮಾಡಿ ವಿಸ್ತರಿಸಿದರು. ಸ್ವಲ್ಪ ವರ್ಷಗಳ ಬಳಿಕ ಚನ್ನಮ್ಮ ವೃತ್ತದ ಹತ್ತಿರದ ಬೆಳಗಾವಿ ರಸ್ತೆಯಲ್ಲಿ ಈಗ ಕೆಆರ್‌ಸಿಇಎಸ್ ಕಾಲೇಜು ಎದುರಿಗೆ ಎರಡು ಎಕರೆ ಭವ್ಯ ಪ್ರದೇಶದಲ್ಲಿ ಶ್ರೀ ಬಸವೇಶ್ವರ ಟ್ರೇಡರ್ಸ್ ಮತ್ತು ಸಾಗರ ಇಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ತಲೆ ಎತ್ತಿ ನಿಂತಿದೆ. ಈಗ ಶ್ರೀಬಸವೇಶ್ವರ ಟ್ರೇಡರ್ಸ್ ಮತ್ತು ಸಾಗರ ಇಲೆಕ್ಟ್ರಾನಿಕ್ಸ್ ಕಿತ್ತೂರು ಕರ್ನಾಟಕ ಭಾಗದಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ಇವರನ್ನು ನಂಬಿಕೊಂಡು 20 ಕುಟುಂಬ ಬದುಕು ಕಟ್ಟಿಕೊಂಡಿವೆ.
15 ವರ್ಷಗಳಿಂದ 20 ಕಾರ್ಮಿಕರು ಶ್ರೀ ಬಸವೇಶ್ವರ ಟ್ರೇಡರ್ಸ್, ಸಾಗರ ಇಲೆಕ್ಟ್ರಿಕಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಲೀಕರಾದ ಸಿದ್ದರಾಮ ಲಿಂಗಶೆಟ್ಟಿ ಅವರು ಯಾವತ್ತೂ ಕಾರ್ಮಿಕರನ್ನು ಕಾರ್ಮಿಕರಂತೆ ನೋಡಿಲ್ಲ. ಮನೆಯ ಮಕ್ಕಳಂತೆ ಅವರೊಂದಿಗೆ ಕಷ್ಟ ಸುಖದಲ್ಲಿ ಭಾಗಿಯಾಗುತ್ತಾರೆ. ಕಾರ್ಮಿಕರು ಕೂಡಾ ಅಂಗಡಿ ನಮ್ಮದು ಎಂದುಕೊಂಡು ತಿಳಿದು ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮ ಲಿಂಗಶೆಟ್ಟಿ ಇವರಿಗೆ ವಿಜಯರತ್ನ ಪ್ರಶಸ್ತಿ ಸಿಕ್ಕಿರುವುದು ಅವರ ಗೆಳೆಯರ ಬಳಗದ ಸಂತೋಷ ಇಮ್ಮಡಿಗೊಳಿಸಿದೆ. | ಮಹಾತೇಶ ತೋರಗಲ್ಲ ಸಿದ್ದರಾಮ ಲಿಂಗಶೆಟ್ಟಿ ಆತ್ಮೀಯ ಗೆಳೆಯರು ನನ್ನ ಆತ್ಮೀಯ ಸ್ನೇಹಿತರಾದ ಸಿದ್ದರಾಮ ಲಿಂಗಶೆಟ್ಟಿ ಅವರಿಗೆ ವಿಜಯವಾಣಿ ವಿಜಯರತ್ನ ಪ್ರಶಸ್ತಿ ಬಂದಿರುವುದಕ್ಕೆ ಅಪಾರ ಸಂತಸವಾಗಿದೆ. ರೈತರು ಹಾಗೂ ಬಡವರ ಪರ ಅಪಾರ ಕಾಳಜಿ ಹೊಂದಿರುವ ಅವರ ವ್ಯಕ್ತಿತ್ವ ಇತರರಿಗೂ ಮಾದರಿಯಾಗಿದೆ. ಕಷ್ಟದಲ್ಲಿ ಬೆಳೆದು ಬಂದ ಅವರು ಇದೀಗ 20ಕ್ಕೂ ಅಧಿಕ ಬಡ ಕುಟುಂಬಗಳಿಗೆ ಅನ್ನದಾತರಾಗಿರುವುದು ನಿಜಕ್ಕೂ ಹೆಮ್ಮೆ ಪಡುವ ಸಂಗತಿ. | ಸುರೇಶ ಕುಲಕರ್ಣಿ ಪ್ರಗತಿಪರ ರೈತ, ಕುರಗುಂದ ಬಡತನದಲ್ಲಿ ಬೆಳೆದು ಬಂದಿರುವ ನನ್ನ ತಂದೆ ಸಿದ್ದರಾಮ ಲಿಂಗಶೆಟ್ಟಿ ಅವರ ಬದುಕೇ ನಮಗೆಲ್ಲ ಮಾರ್ಗದರ್ಶನ. ಅವರ ಸೇವೆ ಪರಿಗಣಿಸಿ ವಿಜಯರತ್ನ ಪ್ರಶಸ್ತಿ ಸಿಕ್ಕಿರುವುದು ನಮಗೆಲ್ಲ ಖುಷಿ ತಂದಿದೆ. ಅವರು ಹಾಕಿಕೊಟ್ಟ ದಾರಿಯಲ್ಲಿಯೇ ನಾವು ನಡೆಯುತ್ತಿದ್ದೇವೆ. | ಸಾಗರ ಲಿಂಗಶೆಟ್ಟಿ ಸಿದ್ದರಾಮ ಅವರ ಪುತ್ರ
| ಬಸವರಾಜ ಕಲಾದಗಿ ಬೈಲಹೊಂಗಲ