

ಮಹಾಲಿಂಗಪುರ: ಇಂಚಗೇರಿ ಸಂಪ್ರದಾಯ ಮತ್ತು ಮಾಧವಾನಂದ ಪ್ರಭುಗಳ ಮಾತು ಉಳಿಸಲು ಜೀವನದುದ್ದಕ್ಕೂ ಸಂಕಷ್ಟದ ಹಾದಿಯಲ್ಲೇ ಸಾಗಿ ಗಿರಿಮಲ್ಲೇಶ್ವರ ಆಶ್ರಮ ಕಟ್ಟಿ ಗಿರಿಮಲ್ಲೇಶ್ವರ ಮತ್ತು ಮಾಧವಾನಂದರಿಗೆ ನಿತ್ಯ ಪೂಜೆ ನೆರವೇರುವಂತಾಗಲು ಕಾರಣವಾದವರೆ ದಿ. ಸಂಗಪ್ಪ ಕದ್ದಿಮನಿ ಮಹಾರಾಜರೆಂದು ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದ ಸಹಜಾನಂದ ಸ್ವಾಮಿಗಳು ಹೇಳಿದರು.
ಸ್ಥಳೀಯ ಗಿರಿಮಲ್ಲೇಶ್ವರ ಆಶ್ರಮದಲ್ಲಿ ಗಿರಿಮಲ್ಲೇಶ್ವರ ಮಹಾರಾಜರ ಸಂಘ, ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್, ಹಾಗೂ ಅಧ್ಯಾತ್ಮ ಐಸಿರಿ ಸಂಗಪ್ಪ ಕದ್ದಿಮನಿ ಮಹಾರಾಜರ ಅನುಭಾವ ಸಂಘದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಿ. ಸಂಗಪ್ಪ ಕದ್ದಿಮನಿ ಅವರ 6ನೇ ಪುಣ್ಯಸ್ಮರಣೆ ಸಪ್ತಾಹ, ಸೇವಾಭೂಷಣ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಾಧವಾನಂದ ಪ್ರಭುಜಿ ಪರಮ ಭಕ್ತರಾಗಿದ್ದ ಕದ್ದಿಮನಿ ಅವರಿಗೆ ಗುರುವಿನ ಆಶೀರ್ವಾದ ಇದ್ದುದರಿಂದಲೇ ಇಂದು ಅವರ ಪುಣ್ಯರಾಧನೆ ನಡೆಯುತ್ತಿದೆ. ಆ ದೇವರನ್ನು ಸ್ಮರಿಸಿ ನಿತ್ಯ ಪೂಜೆ ಮಾಡುವರಿಗೆ ಎಂದೂ ಕಷ್ಟ ಕಾರ್ಪಣ್ಯ ಬರುವುದಿಲ್ಲ ಎಂದು ತಿಳಿಸಿದರು.
ಡಾ. ಎ. ಆರ್. ಬೆಳಗಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಿರಿಮಲ್ಲೇಶ್ವರರು ಹಾಗೂ ಮಾಧವಾನಂದರನ್ನು ನಂಬಿದವರಿಗೆ ಎಂದು ಕೆಡುಕಾಗುವುದಿಲ್ಲ. ಪ್ರತಿಯೊಬ್ಬರೂ ಒತ್ತಡದ ಕೆಲಸದಲ್ಲೂ ನಿತ್ಯ ಸ್ವಲ್ಪ ಸಮಯ ಆ ದೇವರ ಸ್ಮರಣೆ ಮಾಡಬೇಕು ಎಂದರು.
ಡಾ. ವಿಜಯ ಹಂಚಿನಾಳ, ಕಂಕಣವಾಡಿಯ ಮಾರುತಿ ಶರಣರು ಮಾತನಾಡಿದರು.
ಇದಕ್ಕೂ ಮುನ್ನ ಪುರಸಭೆ ಅಧ್ಯಕ್ಷ ಯಲ್ಲಣ್ಣಗೌಡ ಪಾಟೀಲ ಹಾಗೂ ಗಣ್ಯರು ದಿ. ಸಂಗಪ್ಪ ಕದ್ದಿಮನಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಮಾರಂಭ ಉದ್ಘಾಟಿಸಿದರು.
ಪ್ರಶಸ್ತಿ ಪ್ರದಾನ: ಸಮಾಜದಲ್ಲಿನ ವಿವಿಧ ಕ್ಷೇತ್ರಗಳ ಸಾಧಕರಾದ ಬನಹಟ್ಟಿಯ ಪ್ರಭು ಕೋಪರ್ಡೆ, ಸಂಗಾನಟ್ಟಿಯ ಯಮನಪ್ಪ ಗಾಡಿಕಾರ, ಮಹಾಲಿಂಗಪುರದ ಡಾ. ಸಂಗಮೇಶ ಹಿಡಕಲ್, ಭಜನಾ ಕಲಾವಿದ ಶಂಕರ ನೀಲಾರಿ, ಗುತ್ತಿಗೆದಾರ ಹುಚ್ಚೇಶ ವಡ್ಡರ ಅವರಿಗೆ ಸೇವಾ ಭೂಷಣ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸತ್ಯಪ್ಪ ಮಹಾರಾಜರು, ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಹುಮಾಯಿನ್ ಸುತಾರ, ಎಸ್. ಆರ್. ಹಿಡಕಲ್, ಅರವಿಂದ ವಕೀಲರು, ಆನಂದ ದೇಸಾಯಿ ಮಾತನಾಡಿದರು. ಡಾ. ಮಂಜುನಾಥ್ ಚನ್ನಾಳ, ಶ್ರೀಶೈಲ ಬಾಡನವರ, ಅಡಿವೆಪ್ಪ ಶಿರೋಳ ಇದ್ದರು.
ಬಸವರಾಜ ಮೇಟಿ ನಿರೂಪಿಸಿದರು. ಲಕ್ಷ್ಮಣ ಕಿಶೋರ ಸ್ವಾಗತಿಸಿದರು. ಷಣ್ಮುಖ ಕದ್ದಿಮನಿ ವಂದಿಸಿದರು. ಜಾನಪದ ವೈಭವ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ವಿವಿಧ ಕಲಾ ತಂಡಗಳು ಭಾಗವಹಿಸಿ ತಮ್ಮ ಕಲೆ ಪ್ರದರ್ಶಿಸಿದವು. ಪ್ರತಿ ತಂಡಗಳಿಗೂ ಪ್ರಶಸ್ತಿ ಪತ್ರ ನೀಡಲಾಯಿತು.