

ಸಿದ್ದಾಪುರ: ನಾವು ಧರ್ಮಮಾರ್ಗದಲ್ಲಿರುವಾಗ ನಮಗೆ ದಾರಿ ತಪ್ಪಿಸಲು ಅನೇಕರು ಪ್ರಯತ್ನಿಸುತ್ತಾರೆ. ಆಗ ನಾವು ವಿವೇಚನೆಯಿಂದ ಕಾರ್ಯ ಮಾಡಬೇಕು. ಅನರ್ಥಕ್ಕೆ ಎಡೆ ಮಾಡಿಕೊಳ್ಳದೇ, ಗುರುವಿನ ಮಾರ್ಗದರ್ಶನದೊಂದಿಗೆ ಸನ್ಮಾರ್ಗದಲ್ಲಿ ಸಾಗಬೇಕು ಎಂದು ಶ್ರೀಮನ್ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಶ್ರೀಮನ್ನೆಲೆಮಾವು ಮಠದ ಚಾತುರ್ವಸ್ಯದ ಕಾರ್ಯಕ್ರಮದಲ್ಲಿ ಹೇರೂರು ಸೀಮೆಯ ಅತ್ತೀಸವಲಿನ ಗ್ರಾಮಸ್ಥರ ಪಾದುಕಾ ಪೂಜೆ ಹಾಗೂ ಭಿಕ್ಷಾವಂದನೆ ಸ್ವೀಕರಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಮಾನವನು ಧರ್ವಚರಣೆಯ ಮೂಲಕ ಉತ್ತಮವಾದ ಜೀವನದ ಮಾರ್ಗವನ್ನು ಕಂಡುಕೊಂಡು ಇತರರಿಗೆ ಉಪಕಾರವನ್ನು ಮಾಡುತ್ತಾ ಸನ್ಮಾರ್ಗದಲ್ಲಿ ನಡೆದುಕೊಳ್ಳುವುದೇ ಧರ್ಮಮಾರ್ಗ. ನಾವು ಅದರಲ್ಲಿ ನಡೆದುಕೊಳ್ಳಬೇಕು. ಶ್ರೀ ಶಂಕರ ಭಗವತ್ಪಾದಾಚಾರ್ಯರ ಸ್ತೋತ್ರಗಳನ್ನು ಕಲಿತು ಓದಿ ಅದರ ಮಹತ್ವವನ್ನು ಅರಿತಾಗ ನಮಗೆ ಜೀವನದ ಮೌಲ್ಯದ ಅರಿವಾಗುತ್ತದೆ. ಸನ್ಮಾರ್ಗದಲ್ಲಿ ಧರ್ಮ ಮಾರ್ಗದಲ್ಲಿ ನಾವು ಸಾಗಬೇಕು. ಇದರಿಂದ ನಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಶ್ರೀಗಳು ಹೇಳಿದರು.
ವಿನಾಯಕ ಭಟ್ಟ ನೆಲೆಮಾವು ಇವರು ಗುರುಪಾದಕಾಪೂಜೆಯ ಮಹತ್ವವನ್ನು ವಿವರಿಸಿದರು. ಅಕ್ಷಯ ಭಟ್ಟ ಪಾದುಕಾಪೂಜೆ ನಡೆಸಿಕೊಟ್ಟರು. ಶ್ರೀಗಳು ಎಲ್ಲ ಭಕ್ತರಿಗೆ ಆಶೀರ್ವಾದ ಮಂತ್ರಾಕ್ಷತೆ ನೀಡಿ ಹರಸಿದರು