ಸಂಕಷ್ಟ ಸೂತ್ರ ಅನಿವಾರ್ಯ

HYR protest 29
Published on

ಹಿರಿಯೂರು: ನಾಡಿನ ನೆಲ, ಜಲ, ಭಾಷೆ ರಕ್ಷಣೆಗೆ ಕನ್ನಡಿಗರು ಪಕ್ಷಾತೀತವಾಗಿ ಒಗ್ಗೂಡಿ ಹೋರಾಟ ಮಾಡಬೇಕು ಎಂದು ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಹೇಳಿದರು.

ಕರ್ನಾಟಕ ಬಂದ್ ಬೆಂಬಲಿಸಿ ರೈತ ಸಂಘ, ವಿವಿಧ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ರ‌್ಯಾಲಿಯಲ್ಲಿ ಮಾತನಾಡಿದರು.

ಕಾವೇರಿ ನದಿ ನೀರಿನ ಹಂಚಿಕೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ, ವಿಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪ ಬಿಟ್ಟು, ಕರುನಾಡಿನ ಅಸ್ಮಿತೆ ಕಾವೇರಿ ನದಿ ಉಳಿವಿಗೆ ಮಾಡು ಇಲ್ಲವೆ ಮಡಿ ಹೋರಾಟ ಮಾಡಬೇಕು ಎಂದು ಆಗ್ರಹಿಸಿದರು.

ಕಾವೇರಿ ವಿಚಾರದಲ್ಲಿ ಪದೇ ಪದೆ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ರಾಜ್ಯದ ಕಾನೂನು ತಜ್ಞರು, ನೀರಾವರಿ ತಜ್ಞರು, ರೈತ ಮುಖಂಡರು, ನಿವೃತ್ತ ನ್ಯಾಯಧೀಶರ, ಹಿರಿಯ ವಕೀಲರ ಸಲಹೆ ಪಡೆದು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸಬೇಕು, ಭವಿಷ್ಯದಲ್ಲಿ ಕುಡಿವ ನೀರಿನ ಸಂಕಷ್ಟದಿಂದ ಪಾರಾಗಲು ರಾಜ್ಯ ಸರ್ಕಾರ ಜಲ ಸಂಪತ್ತು ಉಳಿವಿಗೆ ಬದ್ಧತೆ ಪ್ರದರ್ಶಿಸಬೇಕು ಎಂದರು.

ಕರವೇ ತಾಲೂಕಾಧ್ಯಕ್ಷ ಕೃಷ್ಣಮೂರ್ತಿ ಪೂಜಾರ್, ಜೆಡಿಎಸ್ ತಾಲೂಕಾಧ್ಯಕ್ಷ ಹನುಮಂತರಾಯ, ರೈತ ಸಂಘದ ತಾಲೂಕಾಧ್ಯಕ್ಷ ಶಿವಕುಮಾರ್, ಭಾರತೀಯ ದಲಿತ ಸಂಘರ್ಷ ಸಮಿತಿ ಮುಖಂಡ ತಿಮ್ಮರಾಜ್, ಕರ್ನಾಟಕ ನವ ನಿರ್ಮಾಣ ಸೇನೆ ತಾಲೂಕಾಧ್ಯಕ್ಷ ಲಕ್ಷ್ಮೀಕಾಂತ್, ಜೈನ್ ಯುವ ಮಂಚ್ ಸದಸ್ಯ ಎನ್.ಎಸ್.ಜೋಧಾ, ಚೇತನ್, ದಸ್ತಗಿರಿ ಸಾಬ್, ಮಂಜುನಾಥ್, ಸಿದ್ದಾರ್ಥ, ಮೋಹನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net