

ಚಿತ್ರದುರ್ಗ: ನಾರಿಯರನ್ನು ಪೂಜಿಸುವ ಸ್ಥಳದಲ್ಲಿ ದೇವತೆಗಳು ನೆಲೆಸಿರುತ್ತಾರೆ ಎನ್ನುವ ನಾಣ್ಣುಡಿ ಒಪ್ಪಲು ಸಾಧ್ಯವಿಲ್ಲದ ಪರಿಸ್ಥಿತಿ ಸದಾ ಇದೆ ಎಂದು ಕಾದಂಬರಿಗಾರ್ತಿ ಸೌಮ್ಯಾ ಪುತ್ರನ್ ಉಡುಪಿ ಹೇಳಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಕೊರ‌್ಲಕುಂಟೆ ಗ್ರಾಮದ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ನಗರದ ಐಶ್ವರ್ಯ ಫೋರ್ಟ್‌ಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಮತ್ತು ‘ಮರಳಿನ ಮನೆಗೊಂದು ಮಂಜಿನ ಮಾಡು’ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಗರ್ಭಿಣಿ ಸೀತಾಮಾತೆಯನ್ನು ಕಾಡಿಗೆ ಕಳುಹಿಸಲಾಯಿತು. ಜೂಜಿನ ಮೋಜಿನ ಆಟಕ್ಕಾಗಿ ದ್ರೌಪದಿಯನ್ನು ಗಂಡಂದಿರೇ ಪಣಕ್ಕಿಟ್ಟಉ ಸೋಲುಂಡರು. ರಾಣಿ ಅಲಮೇಲಮ್ಮ ರಾಜರುಗಳಿಂದ ತನ್ನ ಶೀಲವನ್ನು ಕಾಪಾಡಿಕೊಳ್ಳಲು ನದಿಗೆ ಹಾರಿ ಪ್ರಾಣ ಬಿಟ್ಟಳು. ಈ ರೀತಿ ಮಹಿಳೆಯರ ಜೀವನ ಯಾವ ಕಾಲದಲ್ಲೂ ನೆಮ್ಮದಿಯಾಗಿ ಇರಲಿಲ್ಲ ಎಂದರು.
ಪ್ರಸ್ತುತ ಸಮಾಜದಲ್ಲಿ ಮೂಢನಂಬಿಕೆ ಹೆಸರಲ್ಲಿ ದೇವದಾಸಿ, ವಿಧವಾ ಪದ್ಧತಿ ಮತ್ತು ದೌರ್ಜನ್ಯಗಳು ನಡೆಯುತ್ತಲೇ ಇವೆ. ಈ ಮೂಲಕ ಮಹಿಳಾ ಶೋಷಣೆ ಮುಂದುವರಿಯುತ್ತಲೇ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕಿ ಆರ್.ದಯಾವತಿ ಪುತ್ತೂರ್ಕರ್ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಕಾನೂನುಗಳ ಬಿಗಿಹಿಡಿತದಿಂದಲೂ ಸಮಾನತೆ ಕಾಪಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರಿಸಿದರು.
ಆಧುನಿಕತೆ ಸಮಾಜದಲ್ಲೂ ಹೆಣ್ಣು ಭ್ರೂಣ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ತಮ್ಮನ ವಿದ್ಯಾಭ್ಯಾಸಕ್ಕಾಗಿ ಅಕ್ಕನ ಶಿಕ್ಷಣ ಮೊಟಕುಗೊಳಿಸುವ ಪರಿಸ್ಥಿತಿ ಕಾಣುತ್ತೇವೆ. ಮೂಢನಂಬಿಕೆಯ ಹಿಡಿತಕ್ಕೆ ಮಹಿಳೆಯರನ್ನು ಗುರಿ ಮಾಡುವ ಘಟನೆಗಳು ನಿಲ್ಲುತ್ತಿಲ್ಲ ಎಂದರು.
ಬಾಳಿಸಬೇಕಾದ ಗಂಡಂದಿರೆ ಪೀಡಕರಾಗುತ್ತಿದ್ದಾರೆ. ಹೆಣ್ಣಿನ ಮೇಲೆ ನಡೆಯುತ್ತಿರುವ ಭೀಕರ ಹಲ್ಲೆ, ಹತ್ಯೆ, ಅತ್ಯಾಚಾರ ಪ್ರಕರಣಗಳಿಗೆ ಶಿಕ್ಷೆ ಆಗುತ್ತಿಲ್ಲ. ಇಂತಹ ಪರಿಸ್ಥಿತಿ, ಮನಸ್ಥಿತಿ ಸಮಾಜದಲ್ಲಿ ಮಹಿಳೆಯರ ಅನುಪಾತ ಕುಂಠಿತವಾಗುತ್ತಿದೆ ಎಂದು ಹೇಳಿದರು.
ಶಿಕ್ಷಕಿ ಡಾ.ಚಾಂದಿನಿ ಕಾಲಿದ್, ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಕೆ.ರಹಮತ್‌ವುಲ್ಲಾ, ಹೊಸದುರ್ಗ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಮೆಂಗಸಂದ್ರ ಧನಂಜಯ, ಡಾ.ಶಫೀವುಲ್ಲಾ, ಲೋಕೋಪಯೋಗಿ ಇಲಾಖೆ ಅಧಿಕಾರಿ ಎಚ್.ಶಿವಕುಮಾರ್, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷೆ ಎನ್.ಎಂ.ಪುಷ್ಪವಲ್ಲಿ, ಬ್ರಹ್ಮಕುಮಾರಿ ವಿವಿಯ ರಶ್ಮಿ, ಆರ್.ರೇಣುಕಾಪ್ರಕಾಶ್, ಶೋಭಾ ಮಲ್ಲಿಕಾರ್ಜುನ, ಜಯಪ್ರಾಣೇಶ್, ತಿಪ್ಪೀರಮ್ಮ, ಸುಮಾ, ಮೀರನಾಡಿಗ್ ಇತರರಿದ್ದರು.