

ಮದ್ದೂರು: ಸರ್ಕಾರ ತೆರೆದಿರುವ ರಾಗಿ ಖರೀದಿ ಕೇಂದದಲ್ಲಿ ರೈತರಿಂದ ರಾಗಿ ಖರೀದಿಸಿ ಹಣ ನೀಡದ ಪರಿಣಾಮ ರೈತರಿಗೆ ಆರ್ಥಿಕವಾಗಿ ತೊಂದರೆಯಾಗಿದೆ ಎಂದು ಆರೋಪಿಸಿ ತಾಲೂಕಿನ ಕೊಪ್ಪದಲ್ಲಿ ಸೋಮವಾರ ರೈತ ಸಂಘದ ಕಾರ್ಯಕರ್ತರು ತಲೆ ಮೇಲೆ ಬಾಂಡ್ಲಿ ಇಟ್ಟುಕೊಂಡು ವಿಭಿನ್ನವಾಗಿ ಪ್ರತಿಭಟನೆ ಮಾಡಿದರು.
ಕೊಪ್ಪದಲ್ಲಿ ರಸ್ತೆ ಸಂಚಾರ ತಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಮದ್ದೂರು-ನಾಗಮಂಗಲ ಮಾರ್ಗದ ಸಂಚಾರಕ್ಕೆ ಕೆಲಕಾಲ ತೊಂದರೆ ಉಂಟಾಯಿತು.
ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಎಪಿಎಂಸಿ ಮಾರ್ಕೆಟ್‌ನಲ್ಲಿ ರೈತರಿಂದ ರಾಗಿ ಖರೀದಿ ಮಾಡಿದ್ದು ಸುಮಾರು ಮೂರು ತಿಂಗಳಿಂದ ರೈತರ ಖಾತೆಗೆ ಬರಬೇಕಿದ್ದ 3 ಕೋಟಿ ರೂ. ಜಮೆ ಆಗಿಲ್ಲ ಎಂದು ಆರೋಪಿಸಿದರು.
ಹಣ ನೀಡದ ಪರಿಣಾಮ ರೈತರು ತಮ್ಮ ಮಕ್ಕಳಿಗೆ ಶಾಲೆಗಳಿಗೆ ಶುಲ್ಕ ಕಟ್ಟಲು ಸಾಧ್ಯವಾಗುತ್ತಿಲ್ಲ. ಇದರಿಂದ ಖಾಸಗಿ ಶಾಲೆಗಳ ಶಿಕ್ಷಕರು ಮಕ್ಕಳನ್ನು ಮನೆಗೆ ಕಳುಹಿಸುತ್ತಿದ್ದಾರೆ. ಮತ್ತೊಂದೆಡೆ ವ್ಯವಸಾಯ ಮಾಡಲು ತೊಂದರೆಯಾಗುತ್ತಿದೆ. ರೈತರ ವ್ಯವಹಾರಕ್ಕೆ ರಾಗಿ ಹಣ ಬರದಿರುವುದರಿಂದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಮುಖಂಡ ಸೊ.ಶಿ.ಪ್ರಕಾಶ್ ಮಾತನಾಡಿ, ರೈತರ ಹಣ ನೀಡುವಂತೆ ತಾಲೂಕು ಕಚೇರಿ ಮುಂಭಾಗ ಇತ್ತೀಚೆಗೆ ರಾಜ್ಯ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೀಘ್ರವಾಗಿ ರಾಗಿ ಖರೀದಿಸಿದ ಹಣವನ್ನು ರೈತರಿಗೆ ನೀಡದೆ ಹೋದರೆ ಮುಂದಿನ ದಿನಗಳಲ್ಲಿ ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಗೆ ಜಾನುವಾರು ಸಮೇತ ಆಗಮಿಸಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಆಗಮಿಸಿದ ಉಪ ತಹಸೀಲ್ದಾರ್ ರವೀಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಜಿ.ಪ್ರಭುಲಿಂಗು, ಮುಖಂಡರಾದ ಶಿವಲಿಂಗಯ್ಯ, ಸೊ.ಶಿ.ಪ್ರಕಾಶ್, ನಿಂಗೇಗೌಡ, ಅರಗಿನಮೇಳೆ ರಾಮೇಗೌಡ, ಮೂಡ್ಯ ಚನ್ನಪ್ಪ, ಜಗದೀಶ್, ಶಿವರಾಮು, ಚಿಕ್ಕಲಿಂಗಯ್ಯ, ದೊರೆಸ್ವಾಮಿ ಇತರರು ಇದ್ದರು.