

ಕಾರವಾರ: ಶಾಲೆಗಳಿಗೆ ಪೂರೈಕೆಯಾಗುವ ಬಿಸಿಯೂಟದ ಬೇಳೆ ಚೀಲಗಳಲ್ಲಿ ಅರ್ಧ ಕಿಲೊ ವ್ಯತ್ಯಾಸ ಇರುವುದು ಕಂಡುಬಂದಿದ್ದು, ಪರಿಶೀಲನೆ ನಡೆಸಿ ವರದಿ ನೀಡುವಂತೆ ಶಾಸಕ ಸತೀಶ ಸೈಲ್ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ಆದೇಶಿಸಿದ್ದಾರೆ.
ಸರ್ಕಾರದ ಅಕ್ಷರ ದಾಸೋಹ ಯೋಜನೆಯಡಿ ಬಿಸಿಯೂಟಕ್ಕೆ ಪೂರೈಕೆಯಾಗುವ ಬೇಳೆಗಳ ಗುಣಮಟ್ಟ ಕಳಪೆಯಾಗಿರುವ ಬಗ್ಗೆ ಕೆಲ ದಿನಗಳ ಹಿಂದೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ನಗರದ ಹೆಸ್ಕಾಂ ಕಚೇರಿಯ ಎದುರಿನ ರಾಜ್ಯ ಆಹಾರ ನಿಗಮದ ಗೋಡೌನ್‌ಗೆ ಶಾಸಕ ಸತೀಶ ಸೈಲ್ ಶುಕ್ರವಾರ ಭೇಟಿ ನೀಡಿದರು.
ಇದನ್ನೂ ಓದಿ:ನೇಣು ಬಿಗಿದುಕೊಂಡು ಬಿಹಾರ ಮೂಲದ ವ್ಯಕ್ತಿ ಆತ್ಮಹತ್ಯೆ
ಲಾರಿಯಿಂದ ಇಳಿಸುತ್ತಿದ್ದ ಶಾಲೆಗಳಿಗೆ ಪೂರೈಸಬೇಕಾದ 50 ಕೆಜಿ ಎಂದು ಬರೆದಿದ್ದ ಬೇಳೆಯ ಚೀಲವನ್ನು ತೂಕ ಮಾಡಿ ನೋಡಿದಾಗ 49.50 ಕೆಜಿ ಮಾತ್ರ ತೂಗುವುದು ಕಂಡುಬಂತು. ಒಂದಲ್ಲ, ಎರಡಲ್ಲ, ಮೂರು ಚೀಲ ತೂಗಿ ನೋಡಿದರೂ ಅದೇ ವ್ಯತ್ಯಾಸ ಕಂಡುಬಂತು. ಬೇಳೆ ಲೋಡ್ ಆಗುವಾಗ ಎಷ್ಟಿತ್ತು ಎಂಬುದನ್ನು ಸಮರ್ಪಕವಾಗಿ ಪರಿಶೀಲಿಸಿ ವರದಿ ನೀಡಿ ಎಂದು ಸೂಚನೆ ನೀಡಿದರು.
ಇದೇ ವೇಳೆ ಸೈಲ್ ಇಂದಿರಾ ಕ್ಯಾಂಟೀನ್‌ಗೂ ಭೇಟಿ ನೀಡಿ ಪರಿಶೀಲಿಸಿದರು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ಶಂಭು ಶೆಟ್ಟಿ, ಮುಖಂಡ ಬಾಬು ಶೇಖ್ ಹಾಗೂ ಇತರರು ಇದ್ದರು.
ಕಡಲ ತೀರದಲ್ಲಿ ಸ್ಕೇಟಿಂಗ್ ರಿಂಕ್
ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿ ಸ್ಕೇಟಿಂಗ್ ರಿಂಕ್ ಮಾಡಲು ಯೋಜನೆ ರೂಪಿಸಲಾಗಿದ್ದು, ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಸತೀಶ ಸೈಲ್ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು. ಸದಾಶಿವಡಗದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಕೆಎಸ್‌ಇಎ ಮುಂದಾಗಿದ್ದು, ಈಗಾಗಲೇ ಜಮೀನನ್ನು ಲೀಸ್‌ಗೆ ನೀಡಲಾಗಿದೆ. ಕಾಮಗಾರಿಯನ್ನು ಪ್ರಾರಂಭಿಸಲು ಶೀಘ್ರ ಕ್ರಮ ವಹಿಸಲಾಗುವುದು. ಸಾರ್ವಜನಿಕರ ಅಲ್ಪವೂ ಜಮೀನು ಪಡೆಯದೇ ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.