

ಮೈಸೂರು: ಒತ್ತಡದ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಯೋಗ, ಧ್ಯಾನ, ಆಯುರ್ವೇದ ಹಾಗೂ ಆಹಾರ ಕ್ರಮಗಳು ಅಗತ್ಯ ಎಂದು ಆಯುರ್ವೇದ ಹಿರಿಯ ವೈದ್ಯ ಡಾ.ಚಂದ್ರಶೇಖರ್ ಹೇಳಿದರು.
ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಅಪೂರ್ವ ಸ್ನೇಹ ಬಳಗದಿಂದ ಚಾಮುಂಡಿಪುರಂನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಆಯುರ್ವೇದ ಗಿಡಗಳ ವಿತರಣೆ, ಆಯುರ್ವೇದದ ಉಪಯೋಗ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಒತ್ತಡದ ಜೀವನದ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯ. ಯೋಗ, ಧ್ಯಾನ, ಆಹಾರ ಪದ್ಧತಿ, ಆಯುರ್ವೇದ ಕುರಿತು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಆಯುರ್ವೇದ ವೈದ್ಯ ಪದ್ಧತಿ ಕಾಯಿಲೆ ಗುಣಪಡಿಸುವ ಜತೆಗೆ ಆರೋಗ್ಯಯುತ ಜೀವನ ನಡೆಸುವ ಕ್ರಮವನ್ನು ಕಲಿಸುತ್ತದೆ ಎಂದು ಸಲಹೆ ನೀಡಿದರು.
ಮುಡಾ ಮಾಜಿ ಅಧ್ಯಕ್ಷ ಯಶಸ್ವಿ ಸೋಮಶೇಖರ್ ಮಾತನಾಡಿ, ಆರೋಗ್ಯಕ್ಕಾಗಿ ಆಸ್ಪತ್ರೆಗಳನ್ನು ಅವಲಂಬಿಸಬಾರದು. ಅಡುಗೆ ಮನೆಯ ಸಾಂಬಾರ ಬಟ್ಟಲಿನಲ್ಲಿ ಆರೋಗ್ಯ ಕಾಯುವ ಪದಾರ್ಥಗಳಿರುತ್ತವೆ. ಅವುಗಳ ಸರಿಯಾದ ಸೇವನೆಯ ಮಹತ್ವ ಅರಿಯಬೇಕು ಎಂದರು.
ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ್ ಮಾತನಾಡಿ, ಆಯುರ್ವೇದ ಸಸ್ಯಗಳ ಬಳಕೆ ಮೂಲಕ ದೀರ್ಘಾವಧಿ ಕಾಯಿಲೆಗಳಿಗೆ ತುತ್ತಾಗುವುದನ್ನು ತಡೆಯಬಹುದು. ಹೀಗಾಗಿ ಜನಸಾಮಾನ್ಯರಿಗೆ ದಿನನಿತ್ಯ ಉಪಯೋಗಕ್ಕೆ ಬರುವ ಗಿಡಮೂಲಿಕೆಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಕಾರ್ಯಕ್ರಮಗಳು ಅಗತ್ಯ ಎಂದು ತಿಳಿಸಿದರು.
ನಗರಪಾಲಿಕೆ ಮಾಜಿ ಸದಸ್ಯ ಮಾ.ವಿ.ರಾಮಪ್ರಸಾದ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ನಗರಪಾಲಿಕೆ ನಾಮ ನಿರ್ದೇಶಿತ ಮಾಜಿ ಸದಸ್ಯ ಜಗದೀಶ್, ಸಂಘಟಕರಾದ ಅಲೋಕ್ ಆರ್.ಜೈನ್, ಅಜಯ್ ಶಾಸ್ತ್ರಿ, ಸಂದೀಪ್, ಚಕ್ರಪಾಣಿ, ಸಚಿಂದ್ರ, ಆದರ್ಶ, ಮಹಾನ್ ಶ್ರೇಯಸ್, ಶಿವಲಿಂಗಸ್ವಾಮಿ ಇತರರು ಇದ್ದರು.
ಆಯುರ್ವೇದ ಸಸ್ಯಗಳಾದ ಅಮೃತಬಳ್ಳಿ, ಕೃಷ್ಣ ತುಳಸಿ, ರಾಮ ತುಳಸಿ, ಬೆಟ್ಟದ ನೆಲ್ಲಿಕಾಯಿ, ದೊಡ್ಡಿಪತ್ರೆ, ಅಗಸೆ ಗಿಡ, ನೇರಳೆ ಗಿಡ, ಬೇವಿನ ಗಿಡ, ಅರಿಶಿಣ ಗಿಡ ಸೇರಿದಂತೆ ಇನ್ನಿತರ ಗಿಡಗಳನ್ನು ವಿತರಿಸಲಾಯಿತು.