ಪೈಪ್‌ಲೈನ್‌ಗೆ ಕನ್ನ ಕೊರೆದು ಡೀಸೆಲ್ ಕಳವು

crime webbb
Published on

ಬಂಟ್ವಾಳ: ಮಣ್ಣಿನಡಿ ಹಾದು ಹೋಗಿರುವ ಪೈಪ್‌ಲೈನ್‌ಗೆ ಕನ್ನ ಕೊರೆದು ಡೀಸೆಲ್ ಕಳವು ಮಾಡುತ್ತಿದ್ದ ಪ್ರಕರಣ ತಾಲೂಕಿನ ಸೊರ್ನಾಡು ಬಳಿ ಬೆಳಕಿಗೆ ಬಂದಿದೆ.
ಇಲ್ಲಿನ ಅರ್ಬಿ ಎಂಬಲ್ಲಿ ಐವನ್ ಎಂಬುವರಿಗೆ ಸೇರಿದ ಖಾಸಗಿ ಜಮೀನಿನಲ್ಲಿ ಮಂಗಳೂರಿನಿಂದ ಹಾಸನಕ್ಕೆ ಹಾದು ಹೋಗಿರುವ ಎಂಆರ್‌ಪಿಎಲ್ ಸಂಸ್ಥೆಗೆ ಸೇರಿದ ಪೈಪ್‌ಲೈನ್‌ಗೆ ಕನ್ನ ಕೊರೆದು ಡೀಸೆಲ್ ಕಳವು ಮಾಡಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜಮೀನಿನ ಮಾಲೀಕ ಐವನ್ ತಲೆಮರೆಸಿಕೊಂಡಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೈಪ್‌ಲೈನ್ ಮೂಲಕ ಪೂರೈಕೆಯಾದ ಡೀಸೆಲ್ ಅಳತೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದ ಹಿನ್ನೆಲೆಯಲ್ಲಿ ಕಂಪನಿ ಅಧಿಕಾರಿಗಳು ಮಂಗಳೂರು ಪೊಲೀಸ್ ಕಮಿಷನರಿಗೆ ದೂರು ನೀಡಿದ್ದರು. ಅಲ್ಲದೆ ಕಂಪನಿಯ ತಾಂತ್ರಿಕ ತಜ್ಞರ ಪರಿಶೀಲನೆ ವೇಳೆ ಇಲ್ಲಿ ಸೋರಿಕೆ ಇರುವುದು ತಿಳಿದು ಬಂದಿದೆ. ಅದರಂತೆ ಐವನ್ ಜಮೀನಿನಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರ ಸಮಕ್ಷಮ ಜೆಸಿಬಿ ಮೂಲಕ ಹೊಂಡ ತೋಡಿದಾಗ ಪೈಪ್‌ಲೈನ್‌ಗೆ ಕನ್ನ ಕೊರೆದು ಡೀಸೆಲ್ ಕದಿಯುತ್ತಿದ್ದುದು ಬೆಳಕಿಗೆ ಬಂದಿದೆ.

ಗೇಟ್‌ವಾಲ್ ನಿರ್ಮಿಸಿ ಡೀಸೆಲ್ ಮಾರಾಟ!: ಐವನ್‌ಗೆ ಸೇರಿದ ಜಮೀನಿನ ರಸ್ತೆಯಲ್ಲಿ ಸುಮಾರು 20 ಅಡಿ ಆಳದಲ್ಲಿ ಹಾದು ಹೋಗಿರುವ ಪೈಪ್‌ಲೈನ್‌ಗೆ ಕನ್ನ ಕೊರೆದು ಅದಕ್ಕೆ ಇನ್ನೊಂದು ಪ್ರತ್ಯೇಕ ಪೈಪ್ ಅಳವಡಿಸಿ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಗೇಟ್‌ವಾಲ್ ನಿರ್ಮಿಸಿ ಟ್ಯಾಪ್ ಮೂಲಕ ಡೀಸೆಲನ್ನು ಕಳವು ಮಾಡಿ ವಾಹನಗಳಿಗೆ ತುಂಬಿಸಿ ಮಾರಾಟ ಮಾಡಲಾಗುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net