ಕಾವೂರು ಬಾವಿಗಳಲ್ಲಿ ಡೀಸೆಲ್ ಅಂಶ ಪತ್ತೆ

 ಡೀಸೆಲ್ ಅಂಶ ಪತ್ತೆಯಾದ ಬಾವಿ
ಡೀಸೆಲ್ ಅಂಶ ಪತ್ತೆಯಾದ ಬಾವಿ
Published on
ಮಂಗಳೂರು: ನಗರದ ಕಾವೂರು ಪರಿಸರದ ಕೆಲವು ಬಾವಿಗಳಲ್ಲಿ ಡೀಸೆಲ್ ಅಂಶ ಪತ್ತೆಯಾಗಿದ್ದು, ಇದರಿಂದ ಬಾವಿ ನೀರನ್ನು ಆಶ್ರಯಿಸಿದ ಸ್ಥಳೀಯರಿಗೆ ಸಮಸ್ಯೆ ಎದುರಾಗಿದೆ.
ಬಲಿಪಗುರಿ ಲೀಲಾವತಿ ಎಂಬವರ ಹಳೇ ಬಾವಿಯ ನೀರನ್ನು ಎರಡು ಬಾರಿ ಸಂಪೂರ್ಣ ಖಾಲಿ ಮಾಡಿ ಶುಚಿಗೊಳಿಸಿದರೂ, ಮತ್ತೆ ಅದೇ ಸಮಸ್ಯೆ ಎದುರಾಗಿದೆ. ಬಾವಿಯ ನೀರಿನ ಮೇಲ್ಭಾಗದಲ್ಲಿ ದಪ್ಪನೆಯ ಎಣ್ಣೆ ಮಿಶ್ರಿತ ಪದರ ಕಾಣಿಸಿಕೊಳ್ಳುತ್ತದೆ. ಈ ಬಾವಿಯ ನೀರನ್ನು ಸುತ್ತಮುತ್ತಲಿನ ಮನೆಯವರು ಕೂಡಾ ಅವಲಂಬಿಸಿದ್ದಾರೆ.
ಸದಾಶಿವ ಎಂಬವರ ಮನೆಯ ಬಾವಿಯಲ್ಲೂ ಡೀಸೆಲ್ ಅಂಶ ಪತ್ತೆಯಾಗಿದೆ. ಇವರ ಬಾವಿಯ ನೀರಿನಲ್ಲಿ ಪೇಪರ್ ಮುಳುಗಿಸಿ ಬೆಂಕಿ ಹಚ್ಚಿದರೂ ಕಾಗದ ಹೊತ್ತಿ ಉರಿಯುತ್ತದೆ. ರಮೇಶ್ ಶೆಟ್ಟಿ ಎಂಬವರ ಬಾವಿಯಲ್ಲೂ ಡೀಸೆಲ್ ಅಂಶ ಪತ್ತೆಯಾಗಿದೆ. ಆರಂಭದಲ್ಲಿ ನೀರಿನಲ್ಲಿ ವಿಚಿತ್ರ ವಾಸನೆ ಬರುತ್ತಿತ್ತು. ನಂತರ ಡೀಸೆಲ್ ಅಂಶ ಇರುವುದು ಗಮನಕ್ಕೆ ಬಂದಿದೆ. ಬಾವಿಯನ್ನು ಅವಲಂಬಿತರಾಗಿದ್ದ ನಾವು ಕುಡಿಯುವ ನೀರಿಗೆ ಏನು ಮಾಡುವುದು ಎಂದು ಆತಂಕವಾಗಿದೆ ಎಂದು ಸದಾಶಿವ ಹೇಳಿದ್ದಾರೆ.
ಸಮೀಪದಲ್ಲೇ ಡೀಸೆಲ್ ಬಂಕ್ ಇದ್ದು ಅಲ್ಲಿಂದ ಸೋರಿಕೆಯಾಗಿರಬಹುದೆಂಬ ಅನುಮಾನದಿಂದ ಅವರಲ್ಲಿ ವಿಚಾರಿಸಿದಾಗ ‘ನಮ್ಮಲ್ಲಿ ಯಾವುದೇ ಸೋರಿಕೆಯಾಗುತ್ತಿಲ್ಲ. ಸೋರಿಕೆಯಾಗುತ್ತಿದ್ದರೆ ಡೀಸೆಲ್ ಕಡಿಮೆಯಾಗುವುದು ಗೊತ್ತಾಗಬೇಕಿತ್ತು. ಅಂತಹ ಯಾವುದೇ ಸಮಸ್ಯೆ ಆಗುತ್ತಿಲ್ಲ’ ಎಂದು ಮಾಲೀಕರು ಹೇಳಿದ್ದಾರೆ.
ಆರೋಗ್ಯ ಅಧಿಕಾರಿಗಳು ನೀರನ್ನು ಕೊಂಡೊಯ್ದು ಪರೀಕ್ಷೆಗೊಳಪಡಿಸಿದಾಗ ಶೇ.27ರಷ್ಟು ಡೀಸೆಲ್ ಅಂಶ ಇರುವುದು ಪತ್ತೆಯಾಗಿದೆ. ಜತೆಗೆ ತೈಲದೊಂದಿಗೆ ಗ್ರೀಸ್ ಅಂಶವೂ ಪತ್ತೆಯಾಗಿರುವುದು ವರದಿಯಲ್ಲಿ ಸಾಬೀತಾಗಿದೆ. ಪಾಲಿಕೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುತ್ತಮುತ್ತಲಿನ ಪ್ರದೇಶಗಳ ಅಂತರ್ಜಲ ಇನ್ನಷ್ಟು ಬಾವಿಗಳಲ್ಲಿ ಡೀಸೆಲ್ ಅಂಶ ಸೇರುವ ಭೀತಿ ಇದ್ದು, ಇದಕ್ಕೆ ನಿಜವಾದ ಕಾರಣ ಏನೆಂಬುದನ್ನು ಪತ್ತೆ ಮಾಡಬೇಕು ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net