

ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಮೊಗರು ಬಳಿಯ ಮಾಯಿಲಾದಲ್ಲಿ ಮಂಗಳವಾರ ಸಾಯಂಕಾಲ ಕೆರೆಯಂತಿರುವ ಆವೆ ಮಣ್ಣಿನ ಪಾಯದಲ್ಲಿ ಮೀನು ಹಿಡಿಯಲು ತೆರಳಿದ್ದ ಅಂಬಿಕಾ ನಗರದ ಜೋಕಿಂ ಮಸ್ಕರೇನಸ್(58) ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದು, ಅವರನ್ನು ರಕ್ಷಿಸಲು ಮುಂದಾದ ಶೇಷಪ್ಪ(50) ಎಂಬುವರು ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕೊನೆಯುಸಿರೆಳೆದಿದ್ದಾರೆ.
ಜೋಕಿಂ ಅವರು ಮನೆಯವರ ಜತೆ ಮೀನು ಹಿಡಿಯಲು ತೆರಳಿದ್ದರು. ಆಗ ಕಾಲು ಜಾರಿ ನೀರಿಗೆ ಬಿದ್ದಿದ್ದರು. ಅಲ್ಲಿಯೇ ಮೀನು ಹಿಡಿಯುತ್ತಿದ್ದ ಶೇಷಪ್ಪ ಈ ಘಟನೆಯನ್ನು ನೋಡಿ ರಕ್ಷಿಸಲು ಓಡಿ ಹೋಗಿ ಹಗ್ಗ ತರುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ.
ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಜೋಕಿಂ ಮಸ್ಕರೇನಸ್ ಅವರನ್ನು ಸ್ಥಳದಲ್ಲಿದ್ದ ಪುತ್ರ ಹಾಗೂ ಇತರರು ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಅವರೂ ಮೃತಪಟ್ಟಿದ್ದರು. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.