

ಮಂಗಳೂರು : ಬೆಳ್ತಂಗಡಿ-ದಿಡುಪೆ-ಎಳನೀರು-ಸಂಸೆ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಅಗತ್ಯವಿರುವ ಸರ್ವೇ ಕಾರ್ಯ ಮತ್ತು ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ದ.ಕ.ಜಿಲ್ಲಾ
ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಬೆಳ್ತಂಗಡಿ ತಾಲ್ಲೂಕು ಮಲವಂತಿಗೆ ಗ್ರಾಮ ವ್ಯಾಪ್ತಿಯ ಎಳನೀರು, ಗುತ್ಯಡ್ಕ, ಬಂಗಾರಗಿ, ಉಕ್ಕುಡ ಮತ್ತು ಕುರ್ಚಾರು ಪ್ರದೇಶಗಳು ದ.ಕ. ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ನೂರಾರು ಕುಟುಂಬಗಳು ತಮ್ಮ ಗ್ರಾಮ ಪಂಚಾಯಿತಿಗೆ
ಭೇಟಿ ನೀಡಬೇಕಾದರೆ ಕುದುರೆಮುಖ-ಬಜಗೋಳಿ-ಬೆಳ್ತಂಗಡಿ ಮೂಲಕ ಸುಮಾರು 120 ಕಿ.ಮೀ ದೂರ ಕ್ರಮಿಸಬೇಕು. ಎಳನೀರು-ದಿಡುಪೆ ರಸ್ತೆಯ ಅಭಿವೃದ್ಧಿಯಾದರೆ ಕೇವಲ 9 ಕಿ.ಮೀ ಹಾಗೂ ತಾಲ್ಲೂಕು ಕೇಂದ್ರಕ್ಕೆ 20 ಕಿ.ಮೀ. ದೂರ ಕ್ರಮಿಸಿದರೆ ತಲುಪಬಹುದಾಗಿದೆ.
ಈ 9 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲು ಈ ಭಾಗದ ಜನರು ಹಲವಾರು ದಶಕಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ, ಈ ರಸ್ತೆಯ ಅಭಿವೃದ್ಧಿ ಮಾಡಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಅಗತ್ಯವಾಗಿರುತ್ತದೆ. ಮಳೆಗಾಲದಲ್ಲಿ ಚಾರ್ಮಾಡಿ ಮತ್ತು ಶಿರಾಡಿ ಘಾಟ್ ರಸ್ತೆಗಳಲ್ಲಿ ಗುಡ್ಡ ಕುಸಿತದಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಎಳನೀರು-ದಿಡುಪೆ ರಸ್ತೆಯನ್ನು ಸಂಸೆಯವರೆಗೆ ಅಭಿವೃದ್ಧಿಪಡಿಸಿದ್ದಲ್ಲಿ ಕರಾವಳಿ ಹಾಗೂ ಘಟ್ಟದ ಮೇಲಿನ ಪ್ರದೇಶಗಳನ್ನು ಸಂಪರ್ಕಿಸಲು ಇನ್ನೊಂದು ಪರ್ಯಾಯ ರಸ್ತೆಯನ್ನು ಅಭಿವೃದ್ಧಿಪಡಿಸಿದಂತಾಗುತ್ತದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.