

ಬೆಂಗಳೂರು: ಪ್ರತಿನಿತ್ಯ ನಿದ್ದೆ ಮಾತ್ರೆ ತೆಗೆದುಕೊಳ್ಳುತ್ತಿದ್ದೆ. ನ.27ರ ರಾತ್ರಿ ಸ್ವಲ್ಪ ಹೆಚ್ಚು ಮಾತ್ರೆ ತೆಗೆದುಕೊಂಡಿದ್ದೆ. ಅದು ಓವರ್ ಡೋಸೆಜ್ ಎಂಬುದು ಗೊತ್ತಾಗಲಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಹೇಳಿಕೆ ನೀಡಿದ್ದಾರೆ.
ನಿದ್ರೆಮಾತ್ರೆಗಳನ್ನು ಸೇವಿಸಿ ಆಸ್ವಸ್ಥಗೊಂಡು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿರುವ ಸಂತೋಷ್ ವಿರುದ್ಧ ಸದಾಶಿವನಗರ ಠಾಣೆ ಪೊಲೀಸರು ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಭಾನುವಾರ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ, ವೈದ್ಯರ ಸಮ್ಮುಖದಲ್ಲಿ ಸಂತೋಷ್ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಕೋರ್ಟ್ಗೆ ‘ಬಿ’ ರಿಪೋರ್ಟ್ ಸಲ್ಲಿಸಿ ಮುಕ್ತಾಯ ಮಾಡಲಿದ್ದಾರೆ. ಸಂತೋಷ್ ಸಂಪೂರ್ಣ ಗುಣಮುಖರಾಗಿದ್ದು, ಶನಿವಾರವೇ ತುರ್ತು ನಿಗಾ ಘಟಕದಿಂದ ಸಾಮಾನ್ಯ ವಾರ್ಡ್ಗೆ ಶಿಫ್ಟ್ ಆಗಿದ್ದಾರೆ. ಸೋಮವಾರ ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ಜಾರ್ಚ್ ಆಗುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.