

ಹಿರೀಸಾವೆ: ಹೋಬಳಿಯ ಕರಿಕ್ಯಾತನಹಳ್ಳಿ ಗ್ರಾಮದೇವತೆ ಶ್ರೀ ದಿಡ್ಡಮ್ಮದೇವಿ ಹಬ್ಬದ ಪ್ರಯುಕ್ತ ಹಸಿರು ಬಂಡಿ ಉತ್ಸವ ಹಾಗೂ ಬಾಯಿಬೀಗ ಕಾರ್ಯಕ್ರಮ ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲ ದೇಗುಲಗಳಿಗೂ ಹಸಿರು ಚಪ್ಪರ ಹಾಕಲಾಗಿದ್ದು, ಬಾಳೆಕಂದು ಕಟ್ಟಿ ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಉತ್ಸವದ ಬೀದಿಯನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಲಾಗಿತ್ತು. ಸಂಜೆ 7.30 ರಲ್ಲಿ ಬಾಳೆಕಂದು, ಮಾವು-ಬೇವಿನ ಪತ್ರೆಯಿಂದ ಸಿಂಗರಿಸಿದ್ದ ಹಸಿರು ಬಂಡಿಗೆ ವಿಶೇಷ ಪೂಜೆ ಸಲ್ಲಿಸಿ ಬಲಿಶಾಂತಿ ನೀಡಲಾಯಿತು. ನಂತರ ಊರ ಮುಂಭಾಗದಲ್ಲಿರುವ ಶ್ರೀ ಮಾರಮ್ಮದೇವಿ ಸನ್ನಿಧಿಯಿಂದ ಶ್ರೀದೇವಿಯ ಅಡ್ಡಪಲ್ಲಕ್ಕಿ ಉತ್ಸವ ಪ್ರಾರಂಭಗೊಂಡು ಶ್ರೀ ಆಂಜನೇಯಸ್ವಾಮಿ ದೇಗುಲ ಹಾಗೂ ಕರಕಲಮ್ಮ ದೇವಿ ದೇಗುಲ ಬಳಸಿಕೊಂಡು ಪ್ರಮುಖ ಬೀದಿಗಳಲ್ಲಿ ಸಾಗಿತು.
ರಾತ್ರಿ 8.30 ರ ಸುಮಾರಿನಲ್ಲಿ ತೆರೆದ ವಾಹನದ ಮೇಲೆ ವಿದ್ಯುತ್ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಪುಷ್ಪ ಪಲ್ಲಕ್ಕಿಯಲ್ಲಿ ಶ್ರೀ ದಿಡ್ಡಮ್ಮ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬಂಡಿ ಹಾಗೂ ಪಲ್ಲಕ್ಕಿ ಉತ್ಸವ ಆರಂಭಗೊಂಡು ಊರ ಹೊರ ಭಾಗದಲ್ಲಿರುವ ಶ್ರೀ ದಿಡ್ಡಮ್ಮದೇವಿ ಮೂಲ ದೇಗುಲದತ್ತ ಸಾಗಿತು.
ಉತ್ಸವದಲ್ಲಿ ಮಹಿಳೆಯರು ತಂಬಿಟ್ಟಿನ ಆರತಿ ಹಿಡಿದು ದೇವಿಯ ಮುಂದೆ ಸರದಿ ಸಾಲಾಗಿ ಸಾಗಿದರೆ, ಹಿರಿಯ ತಾಯಂದಿರು ದೇವಿ ಮೇಲಿನ ಸೋಬಾನೆ ಪದ ಹಾಡಿದರು. ಜತೆಗೆ ಹರಕೆ ಹೊತ್ತಿದ್ದ ಹೆಣ್ಣುಮಕ್ಕಳು ಬಾಯಿಬೀಗ ಚುಚ್ಚಿಸಿಕೊಂಡು ಉತ್ಸವದಲ್ಲಿ ಪಾಲ್ಗೊಂಡರು. ದೇವಿಯ ಮಕ್ಕಳಾದ ಕೆಂಚರಾಯ ಹಾಗೂ ಭೂತರಾಯ ಸೋಮಗಳ ಕುಣಿತ ನೋಡುಗರ ಗಮನ ಸೆಳೆಯಿತು.
ಗ್ರಾಮದ ಹೊರ ಭಾಗದಲ್ಲಿರುವ ದೇವಿಯ ಸನ್ನಿಧಿಯಲ್ಲಿಗೆ ಕರಿಕ್ಯಾತನಹಳ್ಳಿ ಸೇರಿದಂತೆ ಒಕ್ಕಲು ಗ್ರಾಮಗಳಾದ ಮೆಳ್ಳಹಳ್ಳಿ, ಹಿಂಡುಮಾರನಹಳ್ಳಿ, ಗೊಟ್ಟಿಕೆರೆ ಹಾಗೂ ಅಮ್ಮನಹಳ್ಳಿ ಗ್ರಾಮಸ್ಥರು ತಂಬಿಟ್ಟಿನ ಆರತಿಯೊಂದಿಗೆ ಆಗಮಿಸಿದ್ದರು.
ಮಧ್ಯರಾತ್ರಿ 12 ಗಂಟೆಯವರೆಗೂ ದೇವಿಗೆ ವಿವಿಧ ಬಗೆಯ ಪೂಜೆಗಳು ಹಾಗೂ ಉತ್ಸವ ಜರುಗಿದ್ದು, ನಂತರ ದೇವಿಗೆ ವಿಶೇಷ ಪೂಜೆಯೊಂದಿಗೆ ಮಹಾ ಮಂಗಳಾರತಿ ಬೆಳಗಿಸುವ ಮೂಲಕ ಹಬ್ಬಕ್ಕೆ ತೆರೆ ಬಿದ್ದಿತು.