ಪ್ರಭಾವಿ ಒತ್ತಡಕ್ಕೆ ಮಣಿದರಾ ಅಧಿಕಾರಿಗಳು?

28 Jaggu 1A
Published on

ಜಗದೀಶ ಹೊಂಬಳಿ ಧಾರವಾಡ

ಧಾರವಾಡ ಟೋಲ್ ನಾಕಾದಿಂದ ಕಲಘಟಗಿ ರಸ್ತೆ ಒತ್ತುವರಿಯಾಗಿರುವ ಬಗ್ಗೆ ಸರ್ವೇ ಇಲಾಖೆ (ನಗರ ಭೂಮಾಪನ ಇಲಾಖೆ) ವರದಿ ನೀಡಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮೀನಮೇಷ ಎಣಿಸುತ್ತಿದ್ದಾರೆ.

ಸುಮಾರು 1 ಕಿ.ಮೀ. ಮಾರ್ಗದ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಪ್ರಭಾವಿಗಳ ಮನೆಗಳು, ಹೋಟೆಲ್‌ನವರು ರಸ್ತೆ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾಗುತ್ತಿಲ್ಲ. ಇಲ್ಲಿ ರಸ್ತೆ ಸುಧಾರಣೆ ಕಾಮಗಾರಿಯೂ ಅವೈಜ್ಞಾನಿಕವಾಗಿ ನಡೆದಿದ್ದು, ಅಪಘಾತಕಾರಿ ತಿರುವುಗಳು ಸೃಷ್ಟಿಯಾಗಿವೆ. ಕೆಲ ತಿಂಗಳಲ್ಲಿ 7 ಅಪಘಾತಗಳು ಸಂಭವಿಸಿದ್ದು, 5 ಜನ ಮೃತಪಟ್ಟಿದ್ದಾರೆ.

ಪಾಲನೆಯಾಗದ ಜಿಲ್ಲಾಧಿಕಾರಿ ನಿರ್ದೇಶನ

ಸರ್ವೇ ಇಲಾಖೆ ರಸ್ತೆ ಅಳತೆ ಮಾಡಿದ್ದು, ಒತ್ತುವರಿಯಾಗಿದ್ದರ ಕುರಿತು ಲೋಕೋಪಯೋಗಿ ಇಲಾಖೆಗೆ 6 ತಿಂಗಳ ಹಿಂದೆಯೇ ವರದಿ ಸಲ್ಲಿಸಿದೆ. ಇದಾದ ಬಳಿಕ ಜಿಲ್ಲಾಧಿಕಾರಿ ಅವರು ರಸ್ತೆ ಒತ್ತುವರಿ ತೆರವು ಮಾಡುವಂತೆ ಮೌಖಿಕವಾಗಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇಷ್ಟಾಗಿಯೂ ತೆರವು ಕಾರ್ಯವಾಗುತ್ತಿಲ್ಲ. ಇದರಿಂದ 2 ವರ್ಷದಿಂದ ನಡೆಯುತ್ತಿರುವ ರಸ್ತೆ ಸುಧಾರಣೆ ಕಾಮಗಾರಿ ವಿಳಂಬವಾಗುತ್ತಿದೆ ಮತ್ತು ಅಲ್ಲಲ್ಲಿ ಆದರೂ ಅವೈಜ್ಞಾನಿಕವಾಗಿ ಸಾಗಿದೆ.

ನೂರಾರು ವಾಹನಗಳ ಸಂಚಾರ

ಧಾರವಾಡ ಟೋಲ್ ನಾಕಾದಿಂದ ಕಲಘಟಗಿ ರಸ್ತೆಯಲ್ಲಿ ಸಾರಿಗೆ ಬಸ್ ಸೇರಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಒತ್ತುವರಿಯಾಗಿರುವುದರಿಂದ ಅಲ್ಲಲ್ಲಿ ಅಪಘಾತ ವಲಯಗಳಾಗಿ ಮಾರ್ಪಟ್ಟಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಸಮರ್ಪಕವಾಗಿ ರಸ್ತೆ ಸುಧಾರಣೆ ಕಾಮಗಾರಿ ಕೈಗೊಳ್ಳಬೇಕೆಂದರೆ ಒತ್ತುವರಿ ತೆರವು ಮಾಡಲೇಬೇಕಾಗಿದೆ. ಆದರೆ, ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ಕಾಲಹರಣ ಮಾಡುತ್ತಿದ್ದಾರೆ ಎಂಬ ದೂರುಗಳಿವೆ.

ಪೆಟ್ರೋಲ್ ಬಂಕ್, ದೇವಸ್ಥಾನ, ಖಾಸಗಿ ಹೋಟೆಲ್‌ಗಳು ರಸ್ತೆ ಒತ್ತುವರಿ ಮಾಡಿಕೊಂಡಿವೆ ಎಂಬ ಆರೋಪಗಳಿವೆ. ಸರ್ವೇ ಇಲಾಖೆ ವರದಿಯಂತೆಯೂ ಒತ್ತುವರಿ ತೆರವು ಆಗುತ್ತಿಲ್ಲ. ಜತೆಗೆ ರಸ್ತೆ ಮಧ್ಯೆ ಇರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಎರಡು ವರ್ಷದಿಂದ ಮನವಿ ಮಾಡುತ್ತಿದ್ದರೂ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಕಂಬಗಳನ್ನು ತೆರವುಗೊಳಿಸುತ್ತಿಲ್ಲ. ಇದು ಪ್ರಮುಖವಾಗಿ ಶಾಲಾ ಬಸ್, ಬೈಕ್ ಸವಾರರಿಗೆ ದುರ್ಗಮ ಮಾರ್ಗವಾಗಿ ಮಾರ್ಪಟ್ಟಿದೆ.

ರಸ್ತೆ ಒತ್ತುವರಿ ಮಾಡಿದವರಿಗೆ ಈಗಾಗಲೇ ನೋಟಿಸ್ ನೀಡಿದ್ದೇವೆ. ನೋಟಿಸ್ ಅವಧಿ ಮುಗಿದ ಬಳಿಕ ಒತ್ತುವರಿ ತೆರವುಗೊಳಿಸಿ, ರಸ್ತೆ ಸುಧಾರಣೆ ಕಾಮಗಾರಿ ಪೂರ್ಣಗೊಳಿಸುತ್ತೇವೆ. ರಾಘವೇಂದ್ರ ದೊಡಮನಿ, ಎಇಇ ಲೋಕೋಪಯೋಗಿ ಇಲಾಖೆ ಧಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net