ರೈತರಿಗೆ ನೋಟಿಸ್​ ನೀಡಿ, ಬೆಂಕಿ ಹಚ್ಚಿದ್ದೇ ಕಾಂಗ್ರೆಸ್ ಸರ್ಕಾರ: ಬಿ.ವೈ.ವಿಜಯೇಂದ್ರ ಕಿಡಿ | B.Y.Vijayendra

B.Y.Vijayendra
Published on

ಬೆಂಗಳೂರು: ತಲತಲಾಂತರದಿಂದ ಕೃಷಿ ಮಾಡಿಕೊಂಡ ಜೀವನ ನಡೆಸುತ್ತಿದ್ದ ರೈತರಿಗೆ ನೋಟಿಸ್ ನೀಡಿ, ಸಚಿವ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಬೆಂಕಿ ಹಚ್ಚಿದ್ದೇ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ತಿರುಗೇಟು ನೀಡಿದರು.

ಐಕ್ಯತಾ ಓಟದಲ್ಲಿ ಮಂಗಳವಾರ ಭಾಗಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು, ರೈತರ ಮಾಲೀಕತ್ವದ ಜಮೀನಿಗೆ ವಕ್ಫ್ ಆಸ್ತಿ ತನ್ನದೆಂದು ಹೇಳಿ ನೋಟಿಸ್ ನೀಡಿರುವುದನ್ನು ಪ್ರತಿಪಕ್ಷವಾಗಿ ಬಿಜೆಪಿ ಆಕ್ಷೇಪಿಸಿದೆ. ಇದನ್ನೇ ಕಾಂಗ್ರೆಸ್​ನವರು ಟೀಕಿಸುತ್ತಾ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಪ್ರತಿಯೊಂದು ಲೋಪ ಎತ್ತಿಹಿಡಿದಾಗ ಬಿಜೆಪಿಯನ್ನು ದೂರುವುದು ಕಾಂಗ್ರೆಸ್ ಚಾಳಿಯಾಗಿದೆ. ವಿಜಯಪುರ ಜಿಲ್ಲೆಯ 120 ರೈತರಿಗೆ ನೋಟಿಸ್ ನೀಡಿದ್ದನ್ನು ಸಚಿವರೇ ಒಪ್ಪಿಕೊಂಡಿದ್ದಾರೆ ಎಂದರು.

ವಿಭಜಕ ಪ್ರವೃತ್ತಿಯ ಕಾಂಗ್ರೆಸ್

ಈ ನೋಟಿಸ್ ನಾವು ಕೊಟ್ಟಿದ್ದಾ ? ಬಿಜೆಪಿ ಮೇಲೆ ಆರೋಪ ಮಾಡುವುದು ಬಿಟ್ಟು, ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮೊದಲು ಮಾಡಬೇಕು. ಅನ್ಯಾಯದ ಬಗ್ಗೆ ಪ್ರಬಲವಾಗಿ‌ ಧ್ವನಿ ಎತ್ತಿರದಿದ್ದರೆ ರೈತರ ಬಾಳಿಗೆ ಬೆಂಕಿ ಹಚ್ಚುತ್ತಿದ್ದರು. ಜಾತಿ, ಧರ್ಮದ ಹೆಸರಿನಲ್ಲಿ ಸಮುದಾಯ, ದೇಶ ವಿಭಜಿಸುವ ಪ್ರವೃತ್ತಿ ಕಾಂಗ್ರೆಸ್​ನದ್ದಾಗಿದೆ ಎಂದು ಬಿ.ವೈ.ವಿ ಕಿಡಿಕಾರಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಬೋರ್ಡ್​ನಿಂದಾಗಿ ಉಂಟಾಗಿರುವ ತೊಂದರೆ, ನೊಂದ ರೈತರ ಅಹವಾಲು ಆಲಿಸಲು ಹಿರಿಯ ನಾಯಕ ಗೋವಿಂದ ಕಾರಜೋಳ ನೇತೃತ್ವದ ತಂಡ ಇಂದು ವಿಜಯಪುರದಲ್ಲಿದೆ. ವಸ್ತುಸ್ಥಿತಿ ಅಧ್ಯಯನ ಮಾಡಿ ಸಮಗ್ರ ವರದಿ ನೀಡಿದ ನಂತರ ಮುಂದಿನ ಹೆಜ್ಜೆಯಿಡುತ್ತೇವೆ ಎಂದರು.

ಮನಸ್ಸಿಲ್ಲದೆ ಗೊಂದಲ ಸೃಷ್ಟಿ

ಜಾತಿ ಜನಗಣತಿ ವರದಿ, ಪರಿಶಿಷ್ಟ ಜಾತಿಗೆ ಒಳ ಮೀಸಲು ಒದಗಿಸುವ ವಿಚಾರದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮನಸ್ಸಿಲ್ಲ, ಇಚ್ಛಾಶಕ್ತಿಯೂ ಇಲ್ಲದ ಕಾರಣ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿದ್ದರೆ ಹಿಂದಿನ ಅವಧಿಯಲ್ಲಿ ಎಚ್.ಕಾಂತರಾಜು ವರದಿ ಅಂಗೀಕರಿಸಲು ಅವಕಾಶವಿತ್ತು ಎಂದು ಹೇಳಿದರು‌.

ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣದಲ್ಲೂ ಕಾಲಹರಣ ತಂತ್ರ ಅನುಸರಿಸಿದೆ. ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಅಧಿಕಾರ ನೀಡಿ ಆದೇಶಿಸಿ ಮೂರು ತಿಂಗಳ ನಂತರ ಅತ್ತ ಗಮನಹರಿಸಿದೆ. ದತ್ತಾಂಶ ಸಂಗ್ರಹಣೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ದತ್ತಾಂಶ ಸಂಗ್ರಹಣೆಗೆ ಏಕ ಸದಸ್ಯ ಆಯೋಗ ರಚಿಸುವುದಾಗಿ ಹೇಳಿದ್ದು, ಒಳ ಮೀಸಲು ತಕ್ಷಣ ಜಾರಿ ಬದಲು ಗೊಂದಲ ಹುಟ್ಟಿ ಹಾಕುವ ಪ್ರಯತ್ನ ಎಂದು ಟೀಕಿಸಿದರು‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net