

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಹಳ್ಳಿಗೇರಿ ವ್ಯಾಪ್ತಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದು ರಸ್ತೆ ಮಾಡಿರುವ ಪ್ರಕರಣದಲ್ಲಿ ಅಧಿಕಾರಿಗಳು ಪ್ರಭಾವಿಗಳ ರಕ್ಷಣೆಗೆ ನಿಂತರಾ? ಎಂಬ ಅನುಮಾನ ಮೂಡಿಸುತ್ತಿದೆ. ಬೆಳೆದು ನಿಂತ ಮರಗಳನ್ನು ಕಡಿದು ರಸ್ತೆ ನಿರ್ಮಿಸುತ್ತಿರುವ ಪ್ರಭಾವಿಗಳನ್ನು ಬಿಟ್ಟು ಇನ್ಯಾರನ್ನೋ ಬಲಿಪಶು ಮಾಡುವ ಹುನ್ನಾರ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.
ಬಣದೂರ ಶಾಖೆಯ ಹಳ್ಳಿಗೇರಿ ವ್ಯಾಪ್ತಿಯ ಸರ್ವೇ ನಂ. 22 ಮತ್ತು 25ರಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದು ಅಕ್ರಮವಾಗಿ ರಸ್ತೆ ನಿರ್ಮಿಸುತ್ತಿರುವುದನ್ನು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಬೆಳಕಿಗೆ ತಂದಿದ್ದರು. ಅರಣ್ಯ ಪ್ರದೇಶದಲ್ಲಿನ ಮರಗಳನ್ನು ಕಡಿದು ಅಕ್ರಮವಾಗಿ ಜಲ್ಲಿ ಕಲ್ಲು ಹಾಕಿ ರಸ್ತೆ ಅಗಲೀಕರಣ ಮಾಡಲಾಗುತ್ತಿತ್ತು. ಇದು ಅಽಕಾರಿಗಳ ಸಹಕಾರದಿಂದ ನಡೆದ ಪ್ರಕರಣವಾಗಿದ್ದು, ಇದಕ್ಕೆ ಸಹಕರಿಸಿದ ಅಽಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೊರವರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯತೀಶ ಕುಮಾರ ಅವರಿಗೆ ಮನವಿ ಸಲ್ಲಿಸಿದ್ದರು.
ಈ ಕುರಿತು ಕರ್ನಾಟಕ ಅರಣ್ಯ ಕಾಯ್ದೆಯಡಿ ನವೀನಸಿಂಗ್ ದೌಲತ್‌ಸಿಂಗ್ ಠಾಕೂರ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. 8 ಸಾಗವಾನಿ ಎಳೆಗಳು, 68 ಕರಿಮತ್ತಿ, 42 ಗೊಜ್ಜಲ ಮರ, 59 ಬಿಳಿಮತ್ತಿ ಸೇರಿ 177 ಮರಗಳನ್ನು ಕಡಿಯಲಾಗಿದೆ ಎಂದು ಪ್ರಕರಣದಲ್ಲಿ ನಮೂದಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಿಸುತ್ತಿರುವ ಕುರಿತು ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಕುರಿತು ಡೋಜರ್ ಟ್ರ‍್ಯಾಕ್ಟರ್, ಸಾಗವಾನಿ ಮತ್ತು ಜಂಗ್ಲಿ ಜಾತಿಯ 26 ಎಳೆಗಳನ್ನು ಜಪ್ತಿ ಮಾಡಲಾಗಿದೆ. ಎರಡೂ ಪ್ರಕರಣಗಳಿಗೆ ಸಂಬ0ಧಿಸಿ ನವೀನಸಿಂಗ್ ದೌಲತ್‌ಸಿಂಗ್ ಠಾಕೂರ್ ಎಂಬುವರಿAದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ.
ಸರ್ವೇ ನಂ. 23 ಮತ್ತು 24 ಠಾಕೂರ್ ಕುಟುಂಬಕ್ಕೆ ಸೇರಿದ್ದಾಗಿದ್ದು, ಅದನ್ನು ಶಾಸಕ ವಿನಯ ಕುಲಕರ್ಣಿ ಅವರ ಕುಟುಂಬದವರು ಖರೀದಿಗಾಗಿ ಕೋರ್ಟ್ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕೊರವರ ಆರೋಪಿಸಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಅಽಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೆಳ ಹಂತದ ಸಿಬ್ಬಂದಿಗೆ ಶೋಕಾಸ್ ಕೊಟ್ಟು ಪ್ರಕರಣ ಮುಚ್ಚಿಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ತಾಲೂಕಿನ ಬಣದೂರು ಶಾಖೆಯ ಹಳ್ಳಿಗೇರಿ ವ್ಯಾಪ್ತಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿದು ರಸ್ತೆ ಮಾಡಿರುವ ವಿಷಯ ಮಾಧ್ಯಮ ವರದಿಗಳಿಂದ ಗಮನಕ್ಕೆ ಬಂದಿದೆ. ಪ್ರಕರಣವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಗಮನಕ್ಕೆ ತರಲಾಗುವುದು.
- ಸಂತೋಷ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ
ಕಾಯ್ದಿಟ್ಟ ಅರಣ್ಯದಲ್ಲಿನ ಮರಗಳನ್ನು ಕಡಿದವರ ಬಂಧನವಾಗಬೇಕಿತ್ತು. ಆದರೆ, ಪ್ರಕರಣದ ಹಿಂದೆ ಪ್ರಭಾವಿಗಳು ಇರುವುದರಿಂದ ಇದನ್ನು ಮುಚ್ಚಿ ಹಾಕುವ ಕೆಲಸ ನಡೆದಿರುವ ಶಂಕೆ ವ್ಯಕ್ತವಾಗಿದೆ. ನ್ಯಾಯಾಲಯ ಅಥವಾ ನ್ಯಾಷನಲ್ ಗ್ರೀನ್ ಟ್ರಿಬುನಲ್‌ನಲ್ಲಿ ಪ್ರಕರಣ ದಾಖಲಿಸಿ ಕಾನೂನು ಹೋರಾಟ ಮುಂದುವರಿಸಲಾಗುವುದು.
- ಬಸವರಾಜ ಕೊರವರ, ಜನಜಾಗೃತಿ ಸಂಘದ ಅಧ್ಯಕ್ಷ