

ತುಮಕೂರು: ನೂತನ ಸಚಿವರ ಪ್ರಮಾಣ ವಚನ ಸ್ವೀಕಾರದ ಬೆನ್ನಲ್ಲೆ, ಖಾತೆ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಲೆಕ್ಕಾಚಾರಗಳು ಆರಂಭವಾಗಿದೆ. ಇದರಂತೆ ಊಹಾಪೋಹಗಳೂ ಸೃಷ್ಟಿಯಾಗಿವೆ. ಈ ನಡುವೆ ನೂತನ ಸಚಿವರು ತಮ್ಮ ಮನದಿಂಗಿತವನ್ನು ಬೇರೆ ಬೇರೆ ರೀತಿಯಲ್ಲಿ ಬಹಿರಂಗಪಡಿಸುತ್ತಿದ್ದಾರೆ.
ನೂತನ ಸಚಿವರಾದ ಬಿ.ಸಿ.ಪಾಟೀಲ್ ಶನಿವಾರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂ.ಡಾ.ಶ್ರೀ ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಆಶೀರ್ವಚನ ಪಡೆದರು. ಈ ವೇಳೆ ನಗರ ಶಾಸಕ ಜಿ.ಬಿ ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ ಮತ್ತಿತರರು ಇದ್ದರು.
ಇದೇ ವೇಳೆ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಹಳ್ಳಿ ಹಕ್ಕಿನೂ ಒಂಟಿ ಆಗೋಲ್ಲ, ಕುಮಟಳ್ಳೀನೂ ಒಂಟಿ ಅಲ್ಲ. ಸಿಎಂ ಯಡಿಯೂರಪ್ಪ ನುಡಿದಂತೆ ನಡೆದುಕೊಂಡಿದ್ದಾರೆ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಯಾವ ಖಾತೆ ಕೊಟ್ಟರು ನಿಭಾಯಿಸಬಲ್ಲೆ. ನಾನು ಪೊಲೀಸ್ ಇಲಾಖೆಯಲ್ಲಿದ್ದರಿಂದ ಗೃಹಸಚಿವ, ಸುಧಾಕರ್ ಡಾಕ್ಟರ್ ಆಗಿರೋದರಿಂದ ನೀವೆ ( ಮಾಧ್ಯಮದವರು) ಊಹಿಸಿಬಿಡುತ್ತೀರಾ. ಮುಖ್ಯಮಂತ್ರಿಗಳಿಗೆ ಗೊತ್ತು ಪಾಟೀಲ್ ಗೆ ಯಾವ ಖಾತೆ ಕೊಟ್ಟರೆ ನಿಭಾಯಿಸಬಲ್ಲ ಅಂತ ಗೊತ್ತಿದೆ ಎಂದು ಪ್ರತಿಕ್ರಿಯಿಸಿದರು.