ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆ ಆರಂಭಿಸಿದ್ದೇ ನಾನು: ಸಂಸದ ಬಸವರಾಜ ಬೊಮ್ಮಾಯಿ ತಿರುಗೇಟು

basavaraj bommai campain
Published on

ಶಿಗ್ಗಾಂವಿ: ಕರ್ನಾಟಕದಲ್ಲಿ ಕೆರೆ ತುಂಬಿಸುವ ಯೋಜನೆ ಮೊದಲು ಆರಂಭಿಸಿದವನೇ ನಾನು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಪರ ಶುಕ್ರವಾರ ತಿಮ್ಮಾಪುರ, ಹಿರೇಬೆಂಡಿಗೇರಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ ಅವರು ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಯಾವುದಾದರೂ ಒಂದು ಯೋಜನೆ ತಂದಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಅವರಿಗೆ ತಿಳಿಸಲು ಬಯಸುತ್ತೇನೆ. ಇಡೀ ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆ ಆರಂಭಿಸಿದ್ದೇ ನಾನು ಎಂದು ತಿರುಗೇಟು ನೀಡಿದರು.

ಬಸನಗೌಡ ಪಾಟೀಲ ಯತ್ನಾಳ ಅವರು ಇಂಡಿ ಏತ ನೀರಾವರಿ ಯೋಜನೆ, ಬಿಜಾಪುರ ಸಮಗ್ರ ನೀರಾವರಿ ಯೋಜನೆಗೆ ಹೋರಾಟ ಮಾಡಿದ್ದರು. ಆಗ ಅಲ್ಲಿ ಭಾಗವಹಿಸಿ ಅಂತರ್ಜಲ ಹೆಚ್ಚಿಸಲು ಕೆರೆ ತುಂಬಿಸುವ ಯೋಜನೆ ಮಾಡುವುದು ಸೂಕ್ತ ಎಂದು ತಿಳಿದು, ಅಲ್ಲಿ ಕೆರೆ ತುಂಬಿಸುವ ಯೋಜನೆ ಮಾಡಿದ್ದೇನೆ. ನಂತರ ಶಿಗ್ಗಾಂವಿ, ಸವಣೂರು ಏತ ನೀರಾವರಿ ಕೆರೆ ತುಂಬಿಸುವ ಯೋಜನೆ ಮಾಡಿದ್ದೇನೆ ಎಂದರು.

ವಸತಿ ಸಚಿವ ಜಮೀರ್ ಅಹಮ್ಮದ್ ಅವರು ಬಸವರಾಜ ಬೊಮ್ಮಾಯಿಯವರು ಶಿಗ್ಗಾಂವಿಯಲ್ಲಿ ಒಂದೂ ಮನೆ ಕಟ್ಟಿಲ್ಲ ಎಂದು ಹೇಳಿದ್ದಾರೆ. ನಾನು ಹನ್ನೆರಡು ಸಾವಿರಕ್ಕೂ ಹೆಚ್ಚು ಮನೆ ನಿರ್ಮಾಣ ಮಾಡಿದ್ದೇನೆ. ಜಮೀರ್ ಅಹಮ್ಮದ್ ಅವರೇ, ನೀವು ಶಿಗ್ಗಾಂವಿ ಕ್ಷೇತ್ರಕ್ಕೆ ಒಂದೂವರೆ ವರ್ಷದಲ್ಲಿ ಎಷ್ಟು ಮನೆ ಕಟ್ಟಿಸಿದ್ದೀರಿ? ನಿಮ್ಮ ಕ್ಷೇತ್ರದಲ್ಲಿ ಎಷ್ಟು ಮನೆ ಕಟ್ಟಿಸಿದ್ದೀರಿ? ಎಂದು ಸವಾಲು ಹಾಕಿದರು.

ಇಡೀ ಸರ್ಕಾರ ಬೊಮ್ಮಾಯಿಯನ್ನು ಸೋಲಿಸಲು ಬಂದಿದೆ. ಈ ಚುನಾವಣೆ ಬೊಮ್ಮಾಯಿ ವರ್ಸಸ್ ಕರ್ನಾಟಕ ಸರ್ಕಾರ ಎಂಬಂತಾಗಿದೆ. ಎಲ್ಲರೂ ದುಡ್ಡಿನ ಚೀಲ ತುಂಬಿಕೊಂಡು ಬಂದಿದ್ದಾರೆ. ನಾನು ಇದನ್ನು ಸವಾಲಾಗಿ ಸ್ವೀಕರಿಸಿದ್ದೇನೆ ಎಂದರು.

ಕಳೆದ ಆರೇಳು ತಿಂಗಳಲ್ಲಿ ಪೊಲೀಸ್ ಸ್ಟೇಷನ್ ರಾಜಕಾರಣ ನಡೆಯುತ್ತಿದೆ. ಕಾಂಗ್ರೆಸ್​ನ ಪುಢಾರಿಗಳು ಕ್ಷೇತ್ರದಲ್ಲಿ ಕ್ಲಬ್ ನಡೆಸುತ್ತಿದ್ದ್ದಾರೆ. ಇದು ಬದುಕಿನ ಭವಿಷ್ಯ ನಿರ್ಧರಿಸುವ ಚುನಾವಣೆ. ಅವರು ನಾಲ್ಕು ದಿನ ಜಾತ್ರೆ ಮಾಡಲು ಬಂದಿದ್ದಾರೆ. ಇವರ ಮಾತನ್ನು ಯಾರೂ ನಂಬಬೇಡಿ ಎಂದು ಹೇಳಿದರು.

ನಮ್ಮ ಆಡಳಿತ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಉಪಚುನಾವಣೆಯ ಗೆಲುವಿಗೆ ಶ್ರೀರಕ್ಷೆ ಆಗಲಿದೆ. ಭರತ ಬೊಮ್ಮಾಯಿಯನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸುವಂತೆ ಮನವಿ ಮಾಡಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಬಿಜೆಪಿ ತಾಲೂಕು ಅಧ್ಯಕ್ಷ ವಿಶ್ವನಾಥ ಹರವಿ, ಶಿವಾನಂದ ಮ್ಯಾಗೇರಿ, ಗಂಗಣ್ಣ ಸಾತಣ್ಣನವರ, ತಿಪ್ಪಣ್ಣ ಸಾತಣ್ಣನವರ ಇತರರು ಇದ್ದರು.

ಸರ್ಕಾರದಲ್ಲಿ ಗುಂಡಿ ಮುಚ್ಚಲೂ ದುಡ್ಡಿಲ್ಲ

ಕನಕಪುರದಲ್ಲಿ ಸುಮಾರು ವರ್ಷಗಳಿಂದ ಒಂದೂ ನೀರಾವರಿ ಯೋಜನೆ ಮಾಡಿರಲಿಲ್ಲ. ಅಲ್ಲಿನ ಜನರು ಬಂದು ಮನವಿ ಮಾಡಿದ್ದರು. ಅಲ್ಲಿಗೆ ಹೋಗಿ ನೀರಾವರಿ ಯೋಜನೆ ಜಾರಿ ಮಾಡಿದ್ದೇನೆ. ವರುಣಾ ಕ್ಷೇತ್ರದಲ್ಲಿ 103 ಕಿ.ಮೀ. ರಸ್ತೆ ಮಾಡಿದ್ದು ಬಸವರಾಜ ಬೊಮ್ಮಾಯಿ. ಈ ಸರ್ಕಾರಕ್ಕೆ ರಸ್ತೆ ಗುಂಡಿ ಮುಚ್ಚಲು, ಟಾರ ಹಾಕಲು ಸಹ ಹಣ ಇಲ್ಲ, ಮಣ್ಣು ಹಾಕಿ ರಸ್ತೆ ಗುಂಡಿ ಮುಚ್ಚಿದ್ದಾರೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net