

ಕೊಪ್ಪಳ: ಜಾಗೃತಿ ಮೂಲಕ ನಾಡಿನ ಮನೆ ಮಾತಾದ ಗವಿಮಠ ಜಾತ್ರೆಯಲ್ಲಿ ಮಹಾದಾಸೋಹ ಮುಂದುವರೆದಿದೆ. ಭಕ್ತರು ನಾನಾ ಖಾದ್ಯಗಳು, ರೊಟ್ಟಿ ಹಾಗೂ ತರಕಾರಿ ಸೇರಿ ಇತರ ದವಸ, ಧಾನ್ಯ ಅರ್ಪಿಸುವುದು ಮುಂದುವರೆದಿದೆ. ಇದೀಗ ಕೊಪ್ಪಳ ತಾಲೂಕು ಲಾರಿ ಮಾಲೀಕರ ಸಂಘದವರು 10 ಕ್ವಿಂಟಾಲ್ ಕರದಂಟು ಅರ್ಪಿಸಿದ್ದಾರೆ.
ಸಂಘದಲ್ಲಿ ಬಹುತೇಕರು ಮುಸ್ಲಿಂ ಬಾಂಧವರಿದ್ದಾರೆ. ಅಜ್ಜನ ಜಾತ್ರೆಗೆ ತಮ್ಮದೂ ಒಂದು ಸೇವೆ ಇರಲಿ ಎಂದು ಕರದಂಟು ಸಿಹಿ ತಯಾರಿಸಿ ಬುಧವಾರ ಅರ್ಪಿಸಿದ್ದಾರೆ. ಸಂದಲ್ಲಿ ಸುಮಾರು 45&50 ಸದಸ್ಯರಿದ್ದಾರೆ. ಎಲ್ಲರೂ ಸೇರಿ 5 ಕ್ವಿಂಟಾಲ್ ಸಕ್ಕರೆ, 2 ಕ್ವಿಂಟಾಲ್ ಪುಟಾಣಿ ಹಿಟ್ಟು, 8 ಕೆಜಿ ಕೊಬ್ಬರಿ, 1 ಕೆಜಿ ಗಸಗಸೆ, ಅರ್ಧ ಕೆಜಿ ಯಾಲಕ್ಕಿ, 6 ಕೆಜಿ ತುಪ್ಪ ಹಾಗೂ 10 ಕೆಜಿ ಶೇಂಗಾ ಎಣ್ಣೆ ಕ್ರೋಢಿಕರಿಸಿ ಕರದಂಟು ತಯಾರಿಸಿದ್ದಾರೆ.
ಮಂಗಳವಾರ 8 ಅಡುಗೆ ತಯಾರಕರು ಎಲ್ಲ ಪದಾರ್ಥಗಳನ್ನು ಮಿಶ್ರಣ ಮಾಡಿ ಸಿಹಿ ತಯಾರಿಸಿದರು. ಸಂದ ಸದಸ್ಯರು ಅವರಿಗೆ ನೆರವಾಗಿದ್ದಾರೆ. ಹಿಟ್ಟು ಬೆರೆಸುವುದ, ಒಣಗಿಸುವುದು ಬಳಿಕ ಅವುಗಳನ್ನು ತುಂಡುಗಳಾಗಿ ಕತ್ತಿರಿಸಿ ಬಾಕ್ಸ್ಗೆ ತುಂಬಿದ್ದಾರೆ. ಬುಧವಾರ ಗವಿಮಠದ ಮಹಾ ದಾಸೋಹಕ್ಕೆ ಸಮರ್ಪಿಸಿದರು.
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಚ್.ಎಂ.ಹುಸೇನಿ, ಕಾರ್ಯದರ್ಶಿ ಅಮೀರ್ ಅಲಿ, ಉಪಾಧ್ಯಕ್ಷರಾದ ಹುಸೇನ್ ಬಾಷಾ ಸಂಡೂರು, ಸೈಯ್ಯದ್ ಸಾದಿಕ್ ಅಲಿ ಖಾದ್ರಿ, ಸಹ ಕಾರ್ಯದರ್ಶಿ ಶರಣಗೌಡ ಪಾಲೀಲ್, ಖಜಾಂಚಿ ಚಾಂದ್ ಪಾಷಾ ಮತ್ತು ಇತರ ಸದಸ್ಯರು ಇದ್ದರು.