

ಶಿವಮೊಗ್ಗ: ಮಕ್ಕಳ ಸಾವಿನ ಪ್ರಕರಣ ಹೆಚ್ಚಳಕ್ಕೆ ಅತಿಸಾರ ಬೇಧಿಯೂ ಕಾರಣ. ಪ್ರತಿವರ್ಷ ಸಾವಿರ ಮಕ್ಕಳ ಪೈಕಿ 14 ಮಕ್ಕಳು ಮರಣ ಹೊಂದುತ್ತಿದ್ದಾರೆ. ಇದರಲ್ಲಿ ಸರಾಸರಿ ಐದು ಮಕ್ಕಳು ಅತಿಸಾರ ಬೇಧಿಯಿಂದ ಸಾವನ್ನಪ್ಪುತ್ತಿರುವುದು ಕಳವಳಕಾರಿ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದರು.
ಅತಿಸಾರ ಬೇಧಿ ಬಗ್ಗೆ ನಿರ್ಲಕ್ಷೃ ಸಲ್ಲದು. ಪಾಲಕರು ಸೂಕ್ತ್ತ ಚಿಕಿತ್ಸೆ ಕೊಡಿಸದೇ ಅವೈಜ್ಞಾನಿಕ ಪದ್ಧತಿ ಅನುಸರಿಸುತ್ತಾರೆ. ಮಗು ಸುಸ್ತಾದ ಮೇಲೆ ಆಸ್ಪತ್ರೆಗೆ ದಾಖಲಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಅತಿಸಾರ ಬೇಧಿಯಿಂದಾಗುವ ಮಕ್ಕಳ ಸಾವನ್ನು ತಪ್ಪಿಸಲು ಸರ್ಕಾರ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಜಿಲ್ಲಾಡಳಿತದಿಂದ ಬಸವನಗುಡಿ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಾಕ್ಷಿಕದ ಸಂದರ್ಭದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ತೆರಳಿ ಅತಿಸಾರ ಬೇಧಿ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಒಆರ್‌ಎಸ್ ತಯಾರಿ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಮಕ್ಕಳು ಆರೋಗ್ಯವಾಗಿರಲು ಸಕಾಲದಲ್ಲಿ ಲಸಿಕೆಗಳನ್ನು ಹಾಕಿಸಬೇಕು ಎಂದು ಹೇಳಿದರು.
ಡಿಎಚ್‌ಒ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ಯಾವುದೇ ಮಗುವಿಗೆ ಕನಿಷ್ಠ ಎರಡು ವರ್ಷಗಳವರೆಗೆ ತಾಯಿ ಹಾಲನ್ನು ಕುಡಿಸಬೇಕು. ಆರು ತಿಂಗಳವರೆಗೆ ಯಾವುದೇ ಪೂರಕ ಆಹಾರ ನೀಡದೆ ಕೇವಲ ಎದೆಹಾಲು ಕುಡಿಸಬೇಕು. ಮಗುವಿಗೆ ಬೇಧಿ ಶುರುವಾಗಿದೆ ಎಂದು ಎದೆಹಾಲು ನಿಲ್ಲಿಸಬಾರದು. ಯಾಕೆಂದರೆ ತಾಯಿ ಹಾಲಿನಲ್ಲಿ ಸಾಕಷ್ಟು ಪ್ರಮಾಣದ ಪೌಷ್ಟಿಕಾಂಶ ಜತೆಗೆ ನೀರು ಇರುವುದರಿಂದ ಇದು ಅತ್ಯುತ್ತಮ ಆಹಾರ ಎಂದರು.
ಶೇ.80ರಷ್ಟು ವೈರಲ್ ಅತಿಸಾರ ಬೇಧಿಗೆ ರೋಟಾವೈರಸ್ ಲಸಿಕೆ ನೀಡಲಾಗುವುದು. ಸ್ವಚ್ಛತೆ, ಕೈತೊಳೆಯುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅತಿಸಾರ ಬೇಧಿ ವೇಳೆ ಹಣ್ಣಿನರಸ, ನಿಂಬೆ ಪಾನಕ, ಚಿಟಿಕೆ ಉಪ್ಪು ಮತ್ತು ಸಕ್ಕರೆ ಮಿಶ್ರಿತ ನೀರು ಅಥವಾ ಒಆರ್‌ಎಸ್ ಸೇವಿಸಬೇಕು ಎಂದು ತಿಳಿಸಿದರು.
ನಗರ ಪಾಲಿಕೆ ಸದಸ್ಯ ರಮೇಶ್ ಹೆಗ್ಡೆ, ಜಿಲ್ಲಾ ಲಸಿಕಾಧಿಕಾರಿ ಡಾ.ನಾಗರಾಜ್ ನಾಯ್ಕ, ಸಿಡಿಪಿಒ ಚಂದ್ರಪ್ಪ, ತಾಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಆರೋಗ್ಯ ಶಿಕ್ಷಣಾಧಿಕಾರಿ ಅಖ್ತರ್ ಮುಂತಾದವರಿದ್ದರು.