

ಮಂಡ್ಯ: ಎಳೆಯ ಮಕ್ಕಳಲ್ಲಿ ಅತಿಸಾರ ಬೇಧಿಯಿಂದ ಹಲವಾರು ಆರೋಗ್ಯದ ತೊಂದರೆ ಉಂಟಾಗಿ ಸಾವನ್ನಪ್ಪುವ ಸಂಭವ ಇರುತ್ತದೆ. ಆದ್ದರಿಂದ ಸ್ವಚ್ಛತೆ ಕಾಪಾಡುವುದರ ಮೂಲಕ ಅತಿಸಾರಬೇಧಿಯನ್ನು ತಡೆಗಟ್ಟೋಣ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜು.16 ರಿಂದ 31ರವರೆಗೆ ಅತಿಸಾರಭೇದಿ ತಡೆಗಟ್ಟುವಿಕೆ ಅಭಿಯಾನವನ್ನು ಆಯೋಜಿಸಲಾಗುವುದು. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಬಳಿ 5 ವರ್ಷದೊಳಗಿನ ಮಕ್ಕಳು ಇರುವ ಮನೆಗಳ ಮಾಹಿತಿ ಲಭ್ಯವಿದೆ. ಅಭಿಯಾನದ ಅಂಗವಾಗಿ ಐದು ವರ್ಷದೊಳಗಿನ ಮಕ್ಕಳ ಮನೆಗೆ ಒಆರ್‌ಎಸ್ ಮತ್ತು ಜಿಂಕ್ ಮಾತ್ರೆಗಳನ್ನು ಹಂಚಲಾಗುವುದು ಎಂದರು.
ಅತಿಸಾರ ಬೇಧಿಯಿಂದ ಮಕ್ಕಳಲ್ಲಿ ಮೊದಲು ನಿರ್ಜಲೀಕರಣ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಒಆರ್‌ಎಸ್, ಜಿಂಕ್ ಮಾತ್ರೆಗಳನ್ನು ನೀಡುವ ಪ್ರಮಾಣ ಕುರಿತಂತೆ ಪಾಲಕರಿಗೆ ತಿಳಿಸಿಕೊಡಲಾಗುವುದು. ಅಂಗನವಾಡಿ ಕೇಂದ್ರಗಳಲ್ಲಿ ಅತಿಸಾರ ಚಿಕಿತ್ಸೆಗಾಗಿ ಒಆರ್‌ಎಸ್ ಮತ್ತು ಜಿಂಕ್ ಕಾರ್ನರ್ ಸ್ಥಾಪನೆ ಮಾಡಲಾಗುವುದು. ಕಬ್ಬು ಕಟಾವು ಸಮಯ ಬಂದಿರುವುದರಿಂದ 3000ಕ್ಕೂ ಅಧಿಕ ವಲಸೆ ಕಾರ್ಮಿಕರು ಜಿಲ್ಲೆಗೆ ಆಗಮಿಸಲಿದ್ದಾರೆ. ಅವರು ವಾಸಿಸುವ ಸ್ಥಳ, ಸ್ಲಂಗಳು ಸೇರಿದಂತೆ ಹೆಚ್ಚಾಗಿ ಅತಿಸಾರ ಬೇಧಿ ಪ್ರಕರಣಗಳು ಕಂಡು ಬರುವ ಸ್ಥಳಗಳನ್ನು ಗುರುತಿಸಿ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಎಂದು ಸೂಚಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರು ಮಕ್ಕಳಲ್ಲಿ ಅತಿಸಾರಭೇದಿಯ ಲಕ್ಷಣಗಳು ಕಂಡುಬಂದರೆ ಸ್ಥಳೀಯ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತರಬೇಕು. ಸ್ವಚ್ಛತೆಯ ಕುರಿತು ನಿರ್ಲಕ್ಷೃ ಇರುವ ಸ್ಥಳಗಳಿಗೆ ಭೇಟಿ ನೀಡಿ ಸ್ವಚ್ಛತೆಯ ಕುರಿತಾಗಿ ಜಾಗೃತಿ ಮೂಡಿಸಬೇಕು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆಹಾರ ಸೇವಿಸುವ ಮೊದಲು ಕೈ ತೊಳೆಯುವ ಅಭ್ಯಾಸವನ್ನು ರೂಢಿಸಬೇಕು. ದಢಾರಾ ಮತ್ತು ರುಬೆಲ್ಲಾ ಕಾಯಿಲೆಗಳು ಮಾರಣಾಂತಿಕವೆಂದು ಸಾಬೀತಾಗಿದ್ದು, ಈ ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸಲು ಸಾರ್ವತ್ರಿಕ ಲಸಿಕ ಕಾರ್ಯಕ್ರಮದಲ್ಲಿ 9 ರಿಂದ 11 ತಿಂಗಳಲ್ಲಿ ಮೊದಲನೆಯ ಲಸಿಕೆ ಹಾಗೂ 16 ರಿಂದ 24ನೇ ತಿಂಗಳಲ್ಲಿ ಎರಡನೇ ಲಸಿಕೆ ನೀಡಲಾಗುವುದು. ಪಾಲಕರು ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಕೊಡಿಸಬೇಕು. ಗ್ರಾಮಮಟ್ಟದ ಸಭೆಗಳನ್ನು ನಡೆಸಿ ದಡಾರ ರುಬೆಲ್ಲಾ ಕಾಯಿಲೆ ಕುರಿತಾಗಿ ಜಾಗೃತಿ ಮೂಡಿಸಬೇಕು. ಕಸ ವಿಲೇವಾರಿ ವಾಹನದ ಮೂಲಕ ಮಾಹಿತಿ ಕೊಡಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ರುಬೆಲ್ಲಾ ಹಾಗೂ ದಢಾರ ರೋಗಗಳ ಪತ್ತೆ ಮಾಡಲು ಜನವರಿ ಮಾಹೆಯಿಂದ ಇಲ್ಲಿಯವರೆಗೆ ಜ್ವರ ಹಾಗೂ ರೋಗದ ಲಕ್ಷಣವುಳ್ಳ ಮಕ್ಕಳ 78 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಒಂದು ರುಬೆಲ್ಲಾ ಹಾಗೂ 4 ಮೀಸಲ್ಸ್ ಪ್ರಕರಣ ವರದಿಯಾಗಿರುತ್ತದೆ. ಅವರಿಗೆ ಚಿಕಿತ್ಸೆ ಕೊಡಿಸಿ ಗುಣ ಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವರದಿಯಾದ ಸ್ಥಳಗಳಲ್ಲಿ ವಾಸಿಸುವ ಮಕ್ಕಳನ್ನು ಸಹ ಪರೀಕ್ಷೆಗೆ ಒಳಪಡಿಸಲಾಗಿದ್ದು, ಯಾವುದೇ ಪ್ರಕರಣ ವರದಿಯಾಗಿರುವುದಿಲ್ಲ ಎಂದರು.
ಸಭೆಯಲ್ಲಿ ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ನಿವೃತ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ .ಟಿ.ಎನ್.ಮರೀಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಮೂರ್ತಿ ಇತರರಿದ್ದರು.