

ಯಲ್ಲಾಪುರ: ತಾಲೂಕಿನ ಇಡಗುಂದಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರಿ ಸಂಘದ ವಜ್ರಮಹೋತ್ಸವ ಏ. 28ರಂದು ಸಂಘದ ಆವಾರದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನಾರಾಯಣ ಭಟ್ಟ ಬಟ್ಲಗುಂಡಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ 10.30ಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸುವರು. ವಜ್ರಮಹೋತ್ಸವದ ನೆನಪಿನ ಕಾಣಿಕೆಯನ್ನು ಶಾಸಕ ಶಿವರಾಮ ಹೆಬ್ಬಾರ ಬಿಡುಗಡೆಗೊಳಿಸಲಿದ್ದಾರೆ. ಸಹಕಾರಿ ಸಚಿವ ಕೆ.ಎನ್. ರಾಜಣ್ಣ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಇತರರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 3ರಿಂದ ಸ್ಥಳೀಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 4.30ಕ್ಕೆ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಪಾದಪೂಜೆ ಹಾಗೂ ಶ್ರೀಗಳ ಆಶೀರ್ವಚನ ನೆರವೇರಲಿದೆ. ರಾತ್ರಿ 8ಕ್ಕೆ ಪ್ರಸಿದ್ಧ ಕಲಾವಿದರಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು.
ಸಂಘದ ಉಪಾಧ್ಯಕ್ಷ ಶಿವರಾಮ ಭಟ್ಟ ಕೋಮಡಿ, ನಿರ್ದೇಶಕರಾದ ಶಂಕರ ಭಟ್ಟ ಬಿದ್ರೆ, ಎಂ.ಟಿ.ಗೌಡ, ಮುಖ್ಯಕಾರ್ಯನಿರ್ವಾಹಕ ಶ್ರೀಪಾದ ಭಾಗ್ವತ ಇದ್ದರು.