ಹಾಲಿವುಡ್ ನೆನಪಿಸುವ ‘ಡೈಮಂಡ್ ಕ್ರಾಸ್’ ಚಲನಚಿತ್ರ

dj dvg cinima
Published on

ದಾವಣಗೆರೆ: ‘ಡೈಮಂಡ್ ಕ್ರಾಸ್’ ಚಲನಚಿತ್ರದಲ್ಲಿ ದಾವಣಗೆರೆ ಯುವಕರು ಅಭಿನಯಿಸಿರುವ ಸಾಹಸ ದೃಶ್ಯಗಳು ಹಾಲಿವುಡ್ ಚಿತ್ರಗಳನ್ನು ನೆನಪಿಸುತ್ತವೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಬಿ.ಡಿ. ಕುಂಬಾರ್ ಹೇಳಿದರು.

ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ಚಿತ್ರದ ಟೀಸರ್ ವೀಕ್ಷಿಸಿದ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಯಾವ ಗುರುವಿನ ಸಹಾಯವೂ ಇಲ್ಲದೆ ಮಾರ್ಷಲ್ ಆರ್ಟ್ಸ್ ಕಲಿತು ಸಾಹಸ ದೃಶ್ಯಗಳನ್ನು ಸಂಯೋಜಿಸಿ, ಅಭಿನಯಿಸಿರುವ ದಾವಣಗೆರೆಯ ರಜತ್ ಅಣ್ಣಪ್ಪ, ರಾಜು ಮಂಜಪ್ಪ ಮತ್ತು ಗೆಳೆಯರ ಪ್ರತಿಭೆಯನ್ನು ಶ್ಲಾಘಿಸಿದರು.

ಸಿನಿಮಾ ನೋಡುವ ಮೂಲಕ ನಾವೆಲ್ಲರೂ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸೋಣ ಎಂದು ಹೇಳಿದರು.

ಎಂ.ಬಿ.ಎ ವಿಭಾಗದ ಪ್ರಾಧ್ಯಾಪಕ ಡಾ.ಜೆ.ಕೆ. ರಾಜು ಮಾತನಾಡಿ, ರಜತ್ ಅಣ್ಣಪ್ಪ ಎಂ.ಬಿ.ಎ ವ್ಯಾಸಂಗ ಮಾಡುವಾಗ ತಮ್ಮ ಬಳಿ ಸಲಹೆ ತೆಗೆದುಕೊಂಡಿದ್ದನ್ನು ಸ್ಮರಿಸಿದರು.

ದಿನಗೂಲಿ ಕಾರ್ಮಿಕರ ಮಕ್ಕಳಾದ ಇವರು ಕಷ್ಟಪಟ್ಟು ವ್ಯಾಸಂಗ ಮಾಡಿ, ಸಾಹಸ ಕಲೆ ಕರಗತ ಮಾಡಿಕೊಂಡು ಬೆಳ್ಳಿ ತೆರೆಯಲ್ಲಿ ಮಿಂಚುತ್ತಿರುವುದು ನಾವೆಲ್ಲರೂ ಹೆಮ್ಮೆ ಪಡುವಂತಹ ವಿಷಯ ಎಂದರು.

ನಮ್ಮ ದಾವಣಗೆರೆಯ ಹೆಮ್ಮೆಯ ಈ ಯುವಕರಿಗೆ ಪ್ರೋತ್ಸಾಹ ಅಗತ್ಯವಾಗಿದೆ. ಎಲ್ಲ ಯುವಕರು, ವಿದ್ಯಾರ್ಥಿಗಳು ಬಿಡುವಿದ್ದಾಗ ಈ ಚಲನಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಬೇಕೆಂದು ಸಲಹೆ ನೀಡಿದರು.

ಚಿತ್ರದ ನಾಯಕ ರಜತ್ ಅಣ್ಣಪ್ಪ, ರಾಜ ಮಂಜಪ್ಪ, ರೋಜಿ ಶರತ್, ಹರೀಶ್ ಜಾನಿ, ಸ್ಮಾರ್ಟ್ ನಾಗು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net