ನಾಳೆ ಡಯಾಲಿಸಿಸ್ ಕೇಂದ್ರ ಕಾರ್ಯಾರಂಭ

Oplus_0
ಯಳಂದೂರು ತಾಲೂಕು ಆಸ್ಪತ್ರೆಯಲ್ಲಿ ನೂತನವಾಗಿ ಕಾರ್ಯಾರಂಭ ಮಾಡಲಿರುವ ಡಯಾಲಿಸಿಸ್ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ ಭೇಟಿ ನೀಡಿ ಪರಿಶೀಲಿಸಿದರು.
Published on

ಯಳಂದೂರು: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಬಳಿಯ ನೂತನ ಕಟ್ಟಡದಲ್ಲಿ ಡಯಾಲಿಸಿಸ್ ಕೇಂದ್ರವು ಜೂ.14ರಂದು ಆರಂಭವಾಗಲಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ ಮಾಹಿತಿ ನೀಡಿದರು.

ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ಡಯಾಲಿಸಿಸ್‌ನ ನೂತನ ಕಟ್ಟಡ ಪರಿಶೀಲಿಸಿ ಮಾತನಾಡಿದ ಅವರು, ಡಯಾಲಿಸ್ ಕೇಂದ್ರದಲ್ಲಿ ಒಟ್ಟು ನಾಲ್ಕು ಹಾಸಿಗೆಗಳು, ನಾಲ್ಕು ಯಂತ್ರಗಳು ಇರಲಿವೆ. ಪ್ರತಿ ನಿತ್ಯ 3 ಬ್ಯಾಚ್‌ಗಳಲ್ಲಿ 12 ಮಂದಿಗೆ ಡಯಾಲಿಸ್ ಚಿಕಿತ್ಸೆ ನೀಡಲು ತಯಾರಿ ನಡೆಸಿಕೊಳ್ಳಲಾಗಿದೆ. ಆದರೆ ಆರಂಭಿಕವಾಗಿ 2 ಯಂತ್ರಗಳು ಆರಂಭಗೊಳ್ಳಲಿದ್ದು, ಮುಂದೆ ಇನ್ನೆರಡು ಯಂತ್ರಗಳ ಮೂಲಕ ಚಿಕಿತ್ಸೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ಕೆಲವು ರೋಗಿಗಳಿಗೆ ಇಲ್ಲೇ ಚಿಕಿತ್ಸೆ ನೀಡಲಾಗಿದೆ. ಈ ಕೇಂದ್ರ ಆರಂಭಗೊಂಡ ನಂತರ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಡಯಾಲಿಸ್‌ಗಾಗಿ ದೂರದೂರಿಗೆ ತೆರಳುವ ಬವಣೆ ತಪ್ಪಲಿದೆ ಎಂದು ತಿಳಿಸಿದರು.

ಡಯಾಲಿಸ್ ಕೇಂದ್ರದ ಉಸ್ತುವಾರಿಯನ್ನು ನೆಫ್ರೋಪ್ಲಸ್ ಸಂಸ್ಥೆ ವಹಿಸಿಕೊಂಡಿದ್ದು, ಇದರ ನಿರ್ವಹಣೆಯನ್ನು ಈ ಸಂಸ್ಥೆಯೇ ಮಾಡಲಿದೆ. ಇಲ್ಲಿಗೆ ಬರುವ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಯಾವುದೇ ತೊಂದರೆಯಾಗದಂತೆ ಚಿಕಿತ್ಸೆ ನೀಡಬೇಕು, ಇದಕ್ಕೆ ಬೇಕಾಗಿರುವ ಎಲ್ಲ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಬೇಕು, ಆಸ್ಪತ್ರೆಯ ವೈದ್ಯರೂ ಎಲ್ಲ ರೀತಿಯ ಸಹಕಾರ ನೀಡಬೇಕು. ರೋಗಿಗಳಿಗೆ ವಿನಾಕಾರಣ ಅಲೆಯಿಸುವ ಕೆಲಸವಾಗಬಾರದು ಎಂದು ಎಚ್ಚರಿಕೆ ನೀಡಿದರು.

ತಾಲೂಕು ವೈದ್ಯಾಧಿಕಾರಿ ಡಾ.ಶ್ರೀಧರ್, ನೆಫ್ರೋಪ್ಲಸ್‌ನ ವ್ಯವಸ್ಥಾಪಕ ಪ್ರದ್ಯುಮ್ನ, ಮ್ಯಾಸಲ್, ಮಹೇಶ್ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net