ಬಡರೋಗಿಗಳಿಗೆ ವರದಾನ ಡಯಾಲಿಸಿಸ್ ಸೆಂಟರ್

LAXMESHWAR
ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾರಂಭಿಸಲಾದ ಡಯಾಲಿಸಿಸ್ ಕೇಂದ್ರವನ್ನು ಶಾಸಕ ಡಾ.ಚಂದ್ರು ಲಮಾಣಿ ಶನಿವಾರ ಉದ್ಘಾಟಿಸಿದರು. ತಹಸೀಲ್ದಾರ್ ವಾಸುದೇವ ಎಂ. ಸ್ವಾಮಿ, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀಕಾಂತ ಕಾಟೆವಾಲೆ, ಡಾ, ಗುರುರಾಜ ಕುಡಗಿ, ಡಾ.ಉಮೇಶ ಕೆಳಗಿನಮನಿ, ಡಾ. ಪ್ರವೀಣ ಸಜ್ಜನ ಇತರರಿದ್ದರು.
Published on

ಲಕ್ಷ್ಮೇಶ್ವರ: ಬಡವರ ಅನುಕೂಲಕ್ಕಾಗಿ ತಾಲೂಕು ಕೇಂದ್ರದ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ ಕಲ್ಪಿಸಲಾಗಿದೆ. ಅಗತ್ಯವಿರುವವರು ಇದರ ಸದುಪಯೋಗ ಮಾಡಿಕೊಂಡು ಆರೋಗ್ಯ ಸುಧಾರಿಸಿಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ನ್ಯಾಷನಲ್ ಹೆಲ್ತ್ ಮಿಷನ್(ಎನ್‌ಎಚ್‌ಎಂ) ಅಡಿ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ), ಡಿಸಿಡಿಸಿ ಹೆಲ್ತ್ ಸರ್ವಿಸ್ ಪ್ರೈ.ಲಿ. (ಕಿಡ್ನಿ ಕೇರ್) ಸಹಯೋಗದಲ್ಲಿ 2 ಬೆಡ್‌ಗಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು, ‘ಮೂತ್ರಕೋಶದ ತೊಂದರೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಈ ಕೇಂದ್ರ ಹೆಚ್ಚು ಅನುಕೂಲವಾಗಲಿದೆ. ಕಿಡ್ನಿ ಸಮಸ್ಯೆಯಿಂದ ಬಳಲುವ ರೋಗಿಗಳಿಗೆ ವಾರದಲ್ಲಿ 2ರಿಂದ 3 ಬಾರಿ ಡಯಾಲಿಸಿಸ್ ಮಾಡಬೇಕಾಗುತ್ತದೆ. ಅದಕ್ಕಾಗಿ ಹುಬ್ಬಳ್ಳಿ, ಗದಗಕ್ಕೆ ಹೋಗಬೇಕಾಗಿತ್ತು. ಇತ್ತೀಚೆಗೆ ಶಿರಹಟ್ಟಿಯಲ್ಲಿಯೂ ಘಟಕ ಪ್ರಾರಂಭವಾಗಿತ್ತು. ಈಗ ಲಕ್ಷೇಶ್ವರ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಲಭಿಸುತ್ತಿರುವುದು ಕುಂದಗೋಳ, ಸವಣೂರು, ಶಿಗ್ಗಾಂವಿ, ಶಿರಹಟ್ಟಿ ತಾಲೂಕಿನ ಜನರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದರು.

ತಹಸೀಲ್ದಾರ್ ವಾಸುದೇವ ಎಂ. ಸ್ವಾಮಿ ಮಾತನಾಡಿ, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಚಿಕಿತ್ಸೆ ಸಿಗಬೇಕೆಂಬ ಕೂಗು ಬಹಳ ದಿನಗಳಿಂದ ಇತ್ತು. ಸರ್ಕಾರ ಬಡರೋಗಿಗಳ ಆರೋಗ್ಯ ಸೇವೆಗಾಗಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಡಯಾಲಿಸಿಸ್ ಕೇಂದ್ರ ಕಲ್ಪಿಸಲಾಗಿದೆ ಎಂದರು.

ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀಕಾಂತ ಕಾಟೆವಾಲೆ, ಡಾ, ಗುರುರಾಜ ಕುಡಗಿ, ಡಾ.ಉಮೇಶ ಕೆಳಗಿನಮನಿ, ಡಾ. ಪ್ರವೀಣ ಸಜ್ಜನ, ಶಿರಹಟ್ಟಿ ಮಂಡಳದ ಬಿಜೆಪಿ ಅಧ್ಯಕ್ಷ ಸುನೀಲ ಮಹಾಂತೇಶೆಟ್ಟರ, ನಗರ ಬಿಜೆಪಿ ಅಧ್ಯಕ್ಷ ನವೀನ ಬೆಳ್ಳಟ್ಟಿ, ವಿಜಯ ಮೆಕ್ಕಿ, ಲಂಕೆಪ್ಪ ಶೆರಸೂರಿ, ವಾಸಣ್ಣ ಪಾಟೀಲ, ಗಿರೀಶ ಚೌರಡ್ಡಿ, ತಿಮ್ಮರೆಡ್ಡಿ ಮರಡ್ಡಿ, ಡಾ. ಕುಮಾರಸ್ವಾಮಿ ಹಿರೇಮಠ, ಬಸವರಾಜ ಚಕ್ರಸಾಲಿ, ಅನಿಲ ಮುಳುಗುಂದ, ಫಕೀರೇಶ ಅಣ್ಣಿಗೇರಿ, ಮಂಜುನಾಥ ಗಜಾಕೋಶ, ನವೀನ ಕುಂಬಾರ, ಮಂಜುನಾಥ ಗೊರವರ ಇತರರು ಇದ್ದರು.

ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒಳಗೊಂಡಿರುವ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲಾಗಿದೆ. ಬೆಳಗ್ಗೆ 8ರಿಂದ ಸಂಜೆ 4ರ ತನಕ ಕಾರ್ಯನಿರ್ವಹಿಸಲಿದೆ. ದಿನಕ್ಕೆ 4 ರೋಗಿಗಳಿಗೆ ಡಯಾಲಿಸಿಸ್ ಮಾಡಬಹುದು. ರೋಗಿಗಳ ಆರೋಗ್ಯದ ಸ್ಥಿತಿಗತಿಗೆ ಅನುಗುಣವಾಗಿ ಹೆಚ್ಚುವರಿ ಚಿಕಿತ್ಸೆಯೂ ದೊರೆಯಲಿದೆ. 2 ಸಾವಿರ ರೂ. ಮೌಲ್ಯದ ಚುಚ್ಚುಮದ್ದು ಸೇರಿ ಡಯಾಲಿಸಿಸ್ ಚಿಕಿತ್ಸೆ ಉಚಿತವಾಗಿದೆ.ಸಿದ್ದಲಿಂಗೇಶ್ವರ ಶಿವಶಿಂಪಿಗೇರ, ಡಯಾಲಿಸಸ್ ಕೇಂದ್ರದ ಆಡಳಿತಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net