

ಬಳ್ಳಾರಿ : ಬಾಕಿ ವೇತನ ಪಾವತಿ ಹಾಗೂ ಸೇವಾ ಭದ್ರತೆಗೆ ಆಗ್ರಹಿಸಿ ಡಯಾಲಿಸಿಸ್ ಕೇಂದ್ರಗಳ ಸಿಬ್ಬಂದಿ ಗುರುವಾರ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿರುವ ಹಿನ್ನೆಲೆ ಬಳ್ಳಾರಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಡಯಾಲಿಸಿಸ್ ಕೇಂದ್ರ ಬಂದ್ ಮಾಡಲಾಗಿತ್ತು. ಇದರಿಂದಾಗಿ ಬೆಳಗ್ಗೆಯಿಂದಲೇ ಕೇಂದ್ರದ ಬಾಗಿಲು ಮುಚ್ಚಿದ್ದರಿಂದ ರೋಗಿಗಗಳಿಗೆ ಚಿಕಿತ್ಸೆ ದೊರೆಯಲಿಲ್ಲ. ಕೆಲ ರೋಗಿಗಳು ಬಂದು ಹೋಗುತ್ತಿದ್ದ ದೃಶ್ಯಗಳು ಕಂಡು ಬಂದವು.
ಜಿಲ್ಲೆಯ ಬಳ್ಳಾರಿ ಜಿಲ್ಲಾಸ್ಪತ್ರೆ ಸೇರಿದಂತೆ ಸಂಡೂರು, ಸಿರಗುಪ್ಪದಲ್ಲಿ ಡಯಾಲಿಸಿಸ್ ಕೇಂದ್ರಗಳಿದ್ದು ಒಟ್ಟು 12 ಯೂನಿಟ್‌ಗಳಿವೆ. ಗುರುವಾರದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಅನಿರ್ದಿಷ್ಟಾವಧಿ ಕೇಂದ್ರಗಳ ಸ್ಥಗಿತಗೊಳಿಸಿ ಸಿಬ್ಬಂದಿ ಬೆಂಗಳೂರಿಗೆ ಹೋಗಿದ್ದರಿಂದ ಸಮಸ್ಯೆ ಉಂಟಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ 8 ಯೂನಿಟ್, ಸಿರಗುಪ್ಪ ಹಾಗೂ ಸಂಡೂರಿನಲ್ಲಿ ತಲಾ ಎರಡು ಯೂನಿಟ್‌ಗಳಿವೆ.
ಪ್ರತಿ ತಿಂಗಳಿಗೆ 200 ಜನ ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. ಕೇಂದ್ರದಲ್ಲಿ 24 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಪ್ರತಿಕ್ರಿಯಿಸಿ, ಡಯಾಲಿಸಿಸ್ ಕೇಂದ್ರದ ಸಿಬ್ಬಂದಿಯ ಬಾಕಿ ವೇತನವನ್ನು ಪಾವತಿಸಲಾಗಿದೆ. ಸೇವೆಗೆ ತೆರಳುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.