ಮಧುಮೇಹ ಪಾದ ಚಿಕಿತ್ಸಾಲಯ ಶೀಘ್ರ ಆರಂಭ

7 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಧುಮೇಹಿ ರೋಗಿಗಳ ಹಿತದೃಷ್ಟಿಯಿಂದ ಇದೀಗ ಮಧುಮೇಹ ಪಾದ ಚಿಕಿತ್ಸಾಲಯವನ್ನು ಆರಂಭಿಸಲಾಗುತ್ತಿದ್ದು, ಪ್ರಸಕ್ತ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಎಸ್​ಡಿಎಂ ನಾರಾಯಣ ಹಾರ್ಟ್​ ಸೆಂಟರ್​ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ ಪಟ್ಟಣಶೆಟ್ಟಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧುಮೇಹದಿಂದ ಪಾದಗಳಲ್ಲಿ ಉಂಟಾಗುವ ಸಮಸ್ಯೆಗಳ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಮತ್ತು ಚಿಕಿತ್ಸೆಗೆ ಈ ಸೌಲಭ್ಯ ಆರಂಭಿಸಲಾಗುತ್ತಿದೆ. ಜಾಗತಿಕವಾಗಿ ಮಧುಮೇಹ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪಾದದ ಸಮಸ್ಯೆಗಳು ಮಧುಮೇಹಿ ರೋಗಿಗಳಿಗೆ ಅತ್ಯಂತ ಗಂಭೀರ ಮತ್ತು ತಡಗಟ್ಟುಬಹುದಾದ ಸಮಸ್ಯೆಗಳಲ್ಲಿ ಒಂದಾಗಿದೆ ಎಂದರು.

ಎಸ್​ಡಿಎಂ ನಾರಾಯಣ ಹಾರ್ಟ್​ ಸೆಂಟರ್​ನಲ್ಲಿ ಒಂದು ವರ್ಷದ ಹಿಂದಷ್ಟೇ ಆರಂಭವಾದ ವ್ಯಾಸ್ಕ್ಯೂಲರ್​ ಚಿಕಿತ್ಸಾ ವಿಭಾಗದಿಂದ 250ಕ್ಕೂ ಹೆಚ್ಚು ಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಉತ್ತರ ಕರ್ನಾಟಕದಲ್ಲಿ ವ್ಯಾಸ್ಕ್ಯೂಲರ್​ ಚಿಕಿತ್ಸಕರು ವಿರಳ. ಇಂತಹ ಸಂಧರ್ಭದಲ್ಲಿ ನಾರಾಯಣ ಹಾರ್ಟ್​ ಸೆಂಟರ್​ ಇದಕ್ಕಾಗಿ ಒಂದು ವಿಶೇಷ ವಿಭಾಗ ಆರಂಭಿಸಿ ಜನರು ದೂರದ ಊರುಗಳಿಗೆ ಅಲೆದಾಡುವುದನ್ನು ತಪ್ಪಿಸಿದೆ. ವ್ಯಾಸ್ಕ್ಯೂಲರ್​ ಮತ್ತು ಎಂಡೋ ವ್ಯಾಸ್ಕ್ಯೂಲರ್​ ತಜ್ಞ ಡಾ. ಬಸವರಾಜೇಂದ್ರ ಆನೂರ್​ಶೆಟ್ರು ನೇತೃತ್ವದಲ್ಲಿ ವಿಭಾಗವು ಕಾರ್ಯ ನಿರ್ವಹಿಸುತ್ತಿದೆ ಎಂದರು.

ಇನ್ನು ವ್ಯಾಸ್ಕ್ಯೂಲರ್​ ಚಿಕಿತ್ಸೆಗೆ ಅತ್ಯಾಧುನಿಕ ಎಂಡೋವೆನಸ್​ ಲೇಸರ್​ ಥೇರಪಿ ಪರಿಚಯಿಸಿದೆ. ಇದು ವ್ಯಾಸ್ಕ್ಯೂಲರ್​ ಆರೈಕೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಸಾಂಪ್ರದಾಯಿಕ ರಕ್ತನಾಳದ ಶಸ್ತ್ರ ಚಿಕಿತ್ಸೆಗಿಂತ ಕನಿಷ್ಠ ಗಾಯದ ಚಿಕಿತ್ಸೆ (ಮಿನಿಮಲ್​ ಇನ್ವೇಸಿವ್​) ಆಯ್ಕೆಯಾಗಿದೆ. ಇದರಿಂದ ರೋಗಿ ಶೀಘ್ರ ಚೇತರಿಕೆ ಆಗುವುದಲ್ಲದೆ, ಕಡಿಮೆ ನೋವು ಮತ್ತು ಉತ್ತಮ ರಕ್ತ ಪರಿಚಲನೆ ಚಿಕಿತ್ಸೆ ನೀಡುತ್ತದೆ ಎಂದರು.

ಹಿರಿಯ ಮಾರುಕಟ್ಟೆ ವ್ಯವಸ್ಥಾಪಕ ಅಜೇಯ ಹುಲಮನಿ, ಡೆಪ್ಯೂಟಿ ಮ್ಯಾನೇಜರ್​ ದುಂಡೇಶ ತಡಕೋಡ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net