

ಉಡುಪಿ: ಆಧುನಿಕ ಜೀವನಶೈಲಿ, ಸ್ಥೂಲಕಾಯ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿ ಇಂದಿನ ಯುವ ಜನಾಂಗದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಜಾಗೃತಿ ವಹಿಸದಿದ್ದಲ್ಲಿ ಭವಿಷ್ಯದಲ್ಲಿ ಅಪಾಯ ಎದುರಾಗಲಿದೆ ಎಂದು ಬೆಂಗಳೂರು ಸೆಂಟರ್ ಫಾರ್ ಡಯಾಬಿಟೀಸ್ ಮತ್ತು ಎಂಡೋಕೆನ್ ಕೇರ್ ಮುಖ್ಯಸ್ಥ ಡಾ. ಕೆ.ಎನ್.ಪ್ರಸನ್ನ ಕುಮಾರ್ ಎಚ್ಚರಿಸಿದರು.
ಭಾನುವಾರ ಜಿಲ್ಲಾಸ್ಪತ್ರೆ ಆವರಣದಲ್ಲಿ ಆದರ್ಶ ಆಸ್ಪತ್ರೆ, ಆದರ್ಶ ಚಾರಿಟೆಬಲ್ ಟ್ರಸ್ಟ್, ಆದರ್ಶ ಸಮೂಹ ಸಂಸ್ಥೆಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಆಸ್ಪತ್ರೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಅಸೋಸಿಯೇಶನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯಾ ಮತ್ತು ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಜರಗಿದ ಮಧುಮೇಹ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.
11 ತಿಂಗಳಿನಿಂದ 25 ವರ್ಷ ವಯೋಮಾನದ ಸುಮಾರು 40 ಸಾವಿರ ಮಧುಮೇಹಿರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಹೆತ್ತವರೂ ಮಕ್ಕಳಿಗೆ ಮಧು ಮೇಹದ ಕುರಿತು ಅರಿವು ಮೂಡಿಸಬೇಕೆಂದು ಕೋರಿದರು. ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಜಾಥಾ ಉದ್ಘಾಟಿಸಿ, ಶುಭ ಸಮಾರಂಭಗಳಲ್ಲಿ ಮಧುಮೇಹಕ್ಕೆ ಪ್ರೇರಕವಾಗಬಲ್ಲ ಪಾಕ ವೈವಿಧ್ಯಗಳು ಒಂದು ಹಂತದಲ್ಲಿ ಮಧುಮೇಹ ಹೆಚ್ಚಳಕ್ಕೆ ಪರೋಕ್ಷವಾಗಿ ಪರಿಣಾಮ ಬೀರುತ್ತಿವೆ. ಈ ಬಗ್ಗೆ ಮನೆ ಮನೆಗೆ ತೆರಳಿ ಆರೋಗ್ಯ ಶಿಕ್ಷಣ ನೀಡಬೇಕೆಂದರು.
ಆದರ್ಶ ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ. ಜಿ. ಎಸ್. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಇದೀಗ ಹತ್ತು ಕೋಟಿ ಮಧುಮೇಹಿರೋಗಿಗಳನ್ನು ಹೊಂದಿದೆ. ಈ ಬಗ್ಗೆ ಎಚ್ಚೆತ್ತು ಕೊಳ್ಳದಿದ್ದಲ್ಲಿ ಮುಂದೆ ಇನ್ನೂ ಹತ್ತು ಕೋಟಿ ಪೂರ್ವ ಮಧುಮೇಹಿಗಳಾಗುವ ಆತಂಕ ಇದೆ. ಇಂದು 5 ಸೆಕೆಂಡಿಗೆ ಓರ್ವ ಡಯಾಬಿಟಿಸ್ ರೋಗಿ ಮೃತ್ಯು ಹೊಂದುತ್ತಿದ್ದಾನೆ. ಡಯಾಬಿಟಿಸ್ ಎಜುಕೇರ್ಟಸ್ ಇಂದಿನ ಅನಿವಾರ್ಯ ಎಂದು ಹೇಳಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ ಶಾಸ್ತ್ರಿ ,ಉಡುಪಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಅಶೋಕ್ , ತಾಲೂಕು ವೈಧ್ಯಾಧಿಕಾರಿ ಡಾ . ವಾಸುದೇವ , ಡಾ.ರಾಮ ರಾವ್, ಐ ಎಂ ಎ ಅಧ್ಯಕ್ಷ ಸುರೇಶ್ ಶೆಣೈ , ಡಾ, ಅನಂತ್ ಶೆಣೈ , ಎ ಪಿ ಐ ಉಡುಪಿ ಮಣಿಪಾಲ ಘಟಕದ ಡಾ. ಅನಂತ್ ಶೆಣೈ, ಲಯನ್ಸ್ ಕ್ಲಬ್ ಡಾ. ಅಶೋಕುಮಾರ್ ವೈ.ಜಿ., ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಮಹ್ಮದ್ ಹನೀಫ್, ವಾಸುದೇವ್ ಉಪಾಧ್ಯ , ಆದರ್ಶ ಆಸ್ಪತ್ರೆಯ ಸಿ ಇ ಓ ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು. ಆದರ್ಶ ಆಸ್ಪತ್ರೆಯ ಅನುಶ್ರೀ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಾಗೃತಿ ಜಾಥಾ ಆದರ್ಶ ಆಸ್ಪತ್ರೆಯವರೆಗೆ ನಡೆಯಿತು.