ಡಿ.2ರಂದು ದಿಯಾ ಉದಯ್ ರಂಗ ಪ್ರವೇಶ

1 Diya
Published on

ಬೆಂಗಳೂರು: ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್‌ನ ಹಿರಿಯ ನೃತ್ಯ ವಿದುಷಿ ಡಾ. ಸುಪರ್ಣಾ ವೆಂಕಟೇಶ್ ಅವರ ಶಿಷ್ಯೆ, ದಿಯಾ ಉದಯ್ ಭರತನಾಟ್ಯ ರಂಗಪ್ರವೇಶಕ್ಕೆ ಅಣಿಯಾಗಿದ್ದಾರೆ. ಮಲ್ಲೇಶ್ವರದ ವಯ್ಯಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನ ರಂಗ ಪ್ರವೇಶಕ್ಕೆ ವೇದಿಕೆಯಾಗಿದೆ. ಡಿ. 2ರ ಸಂಜೆ 5ಕ್ಕೆ ದಿಯಾ ಉದಯ್ ನೃತ್ಯ ಸಮಾರಾಧನೆಗೆ ಮಲ್ಲೇಶ್ವರ ಕ್ಷೇತ್ರದ ಶಾಸಕ ಅಶ್ವತ್ಥ ನಾರಾಯಣ, ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ, ಯೋಗಾಚಾರ್ಯ ಕಲಾ ಸಿಂಚನಂ ಟ್ರಸ್ಟ್ ಮುಖ್ಯಸ್ಥೆ ಯಾಮಿನಿ ಮುತ್ತಣ್ಣ ಮತ್ತು ನೃತ್ಯಗುರು ಡಾ. ಸುಪರ್ಣಾ ಸಾಕ್ಷಿಯಾಗಲಿದ್ದಾರೆ. ತಂದೆ ಉದಯ್ ಕಿಗ್ಗ ಮತ್ತು ತಾಯಿ ಧನಲಕ್ಷ್ಮೀ ಉಪಸ್ಥಿತರಿರಲಿದ್ದಾರೆ.
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಬಿಎ (ಬಿಜಿನೆಸ್ ಅನಾಲಿಟಿಕ್ಸ್) ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿರುವ ದಿಯಾ, ಶೃಂಗೇರಿ ಸಮೀಪದ ಕಿಗ್ಗಾ ಮೂಲದ ಉದ್ಯಮಿ ಜಿ.ಜಿ. ಉದಯ್ ಮತ್ತು ಧನಲಕ್ಷ್ಮೀ ಉದಯ್ ಅವರ ಪುತ್ರಿ.
ಹಿಮ್ಮೇಳ: ದಿಯಾ ಉದಯ್ ರಂಗಪ್ರವೇಶಕ್ಕೆ ಕಲಾ ರಂಗದ ವಿದ್ವನ್ಮಣಿಗಳು ಹಿಮ್ಮೇಳದಲ್ಲಿ ಸಾಥ್ ನೀಡಲಿದ್ದಾರೆ. ಗುರು ಮತ್ತು ಹಿರಿಯ ನೃತ್ಯ ವಿದುಷಿ ಡಾ. ಸುಪರ್ಣಾ ವೆಂಕಟೇಶ್ ನಟುವಾಂಗ, ವಿದ್ವಾನ್ ಬಾಲಸುಬ್ರಹ್ಮಣ್ಯ (ಗಾಯನ), ವಿದ್ವಾನ್ ಜಿ. ಗುರುಮೂರ್ತಿ (ಮೃದಂಗ), ವಿದ್ವಾನ್ ಪ್ರಾದೇಶ ಆಚಾರ್ (ಪಿಟೀಲು)ಮತ್ತು ಪ್ರಸನ್ನ ಕುಮಾರ (ರಿದಂ ಪ್ಯಾಡ್)ನಲ್ಲಿ ಸಹಕರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net