

ಶಿವಮೊಗ್ಗ: ಹಾಕಿ ಹಾಗೂ ಸಾಧನೆಗೆ ಮತ್ತೊಂದು ಹೆಸರೇ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್. ಹಾಕಿಯೆಡೆಗೆ ಅವರಿಗಿದ್ದ ಸೆಳೆತ, ಪ್ರೀತಿ, ಶ್ರದ್ಧೆಯೇ ಅವರ ಸಾಧನೆಗೆ ಕಾರಣವಾಯಿತು. ಹೀಗಾಗಿ ಕ್ರೀಡಾಪಟುಗಳಿಗೆ ಧ್ಯಾನ್‌ಚಂದ್ ಸ್ಫೂರ್ತಿಯಾಗಬೇಕೆಂದು ಶಾಸಕ ಎಸ್.ಎನ್.ಚನ್ನಬಸ್ಪಪ ಹೇಳಿದರು.
ಮೇಜರ್ ಧ್ಯಾನ್‌ಚಂದ್ ಜನ್ಮದಿನದ ಅಂಗವಾಗಿ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಉದ್ಘಾಟಿಸಿದ ಅವರು, ದೇಶಕ್ಕಾಗಿ ಏನಾದರೂ ಸಾಧನೆ ಮಾಡುತ್ತೇನೆ ಎಂಬ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಾಧಿಸಬಹುದು. ಕ್ರೀಡೆಗೆ ಅಂತಹದೊಂದು ಶಕ್ತಿಯೂ ಇದೆ ಎಂದರು.
ಖೇಲೋ ಇಂಡಿಯಾ ಪರಿಕಲ್ಪನೆಯಡಿ ಪ್ರಧಾನಿ ನರೇಂದ್ರ ಮೋದಿ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೂ ಪ್ರೋತ್ಸಾಹ ಸಿಗಬೇಕೆಂಬ ಕಾರಣಕ್ಕೆ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ. ಯುವಜನರು ಇದರ ಉಪಯೋಗ ಪಡೆದುಕೊಳ್ಳಬೇಕೆಂದರು.
ಕ್ರೀಡಾ ತರಬೇತುದಾರರಾದ ಬಾಳಪ್ಪ ಮಾನೆ, ದೇಸಾಯಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಿಗೆ 250ಕ್ಕೂ ಹೆಚ್ಚು ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದರು. ಕ್ರೀಡಾ ರಸಪ್ರಶ್ನೆ ಸ್ಪರ್ಧೆ, ಲಗೋರಿ (ಪುರುಷರಿಗೆ ಮಾತ್ರ), ಬಾಂಬ್ ಇನ್ ದಿ ಸಿಟಿ (ಮಹಿಳೆಯರಿಗೆ ಮಾತ್ರ), ಹಗ್ಗ-ಜಗ್ಗಾಟ (ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ), ನಡಿಗೆ ಸ್ಪರ್ಧೆ (ಪುರುಷರಿಗೆ 4 ಕಿ.ಮೀ., ಮಹಿಳೆಯರಿಗೆ 2 ಕಿ.ಮೀ), ಹಾಕಿ (ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ) ಏರ್ಪಡಿಸಲಾಗಿತ್ತು.