ಗಾನದ ಕೋಲ್ಮಿಂಚು ಹರಿಸಿದ ಧ್ವನಿ ಭಾನುಶಾಲಿ : ಸಂಗೀತದ ಧೂಳೆಬ್ಬಿಸಿದ ರವಿ ಬಸ್ರೂರು

mysore
Published on

ಮೈಸೂರು: ಬಾಲಿವುಡ್ ಪಾಪ್ ಗಾಯಕಿ, ನಟಿ ಧ್ವನಿ ಭಾನುಶಾಲಿ ಗಾನಲಹರಿಯ ಕೋಲ್ಮಿಂಚು ಹರಿಸಿದ್ದರೆ, ಹೊಸತಲೆಮಾರಿನ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಸಂಗೀತದ ಧೂಳೆಬ್ಬಿಸಿದರು…!

ನಗರ ಹೊರವಲಯದ ಉತ್ತನಹಳ್ಳಿ ರಿಂಗ್‌ರೋಡ್ ಬಳಿ ಬಯಲು ಮೈದಾನದಲ್ಲಿ ಆಯೋಜಿಸಿದ್ದ ಯುವ ದಸರಾದ 2ನೇ ದಿನವಾದ ಸೋಮವಾರವೂ ಸಂಗೀತದ ಅಬ್ಬರಕ್ಕೆ ಕಲಾರಸಿಕರು ಮನಸೋತರು.

ಮೊದಲು ವೇದಿಕೆ ಏರಿದ ಗಾಯಕಿ ಧ್ವನಿ ಭಾನುಶಾಲಿ ಎಂಬ ಬಾಲೆ ಮಾದಕ ನರ್ತನ, ಹಾಡಿನೊಂದಿಗೆ ಯುವ ಜನರ ಹೃದಯಕ್ಕೆ ಲಗ್ಗೆ ಹಾಕಿದರು. ಇವರೊಂದಿಗೆ ಸಹ ನೃತ್ಯ ಕಲಾವಿದರೂ ವಯ್ಯರದಿಂದ ಹೆಜ್ಜೆ ಹಾಕಿ ಸಂಭ್ರಮವನ್ನು ಇನ್ನಷ್ಟು ರಂಗೇರಿಸಿದರು.

ಈ ನಡುವೆ, ನಾಲ್ಕು ಹನಿ ಹಾಕಿ ಆತಂಕ ಮೂಡಿಸಿದ ವರುಣದೇವ, ಧ್ವನಿ ಅವರ ಚೆಲುವು ಕಂಡು ತೆರೆಮರೆಗೆ ಸರಿದು ಸಂಗೀತಸುಧೆ ಸುರಿಸಲು ಅನುವು ಮಾಡಿಕೊಟ್ಟ. ತಧ್ವನಿ ಭಾನುಶಾಲಿ, ‘ಲೇಜಾ ರೇ ಲೇಜಾ ರೇ’ ಗೀತೆಯ ಬಳಿಕ ‘ದಿಲ್ಬರ್…,ದಿಲ್ಬರ್…’ ಹಾಡಿನೊಂದಿಗೆ ಬಿನ್ನಾಣದ ನರ್ತನವು ಯುವಕರ ದೆಯಲ್ಲಿ ಕಿಚ್ಚು ಹಚ್ಚಿತು.


ಒಂದರ ಮೇಲೊಂದು ಧಮಾಕ್ ಹಾಡುಗಳು ತೆರೆಮೇಲೆ ಅಪ್ಪ್ಪಳಿಸುವಂತೆ ಮಾಡಿದ ಅವರು, ದಮ್ ಮಾರೋ ದಮ್, ನಾಚ್ ಲೇ ನಾಚ್ ಲೇ, ಜೂಮ್ ಬರಾಬರ್ ಜೂಮ್, ಬ್ಯಾಂಗ್ ಬ್ಯಾಂಗ್…ಹಾಡಿಗೆ ಧ್ವನಿಯಾದರು. ವಿಕ್ರಾಂತ್ ರೋಣ ಸಿನಿಮಾದ ಜನಪ್ರಿಯ ಗೀತೆ ‘ರಾ ರಾ ರಕ್ಕಮ್ಮ’ ಹಾಡಿಗೆ ಸಭಿಕರು ಮೈಚಳಿ ಬಿಟ್ಟು ಕುಣಿದರು. ಪುಷ್ಪಾ ಸಿನಿಮಾದ ‘ಊ ಅಂತಿಯಾ ಮಾವ ಊ ಊ ಅಂತಿಯಾ’ ಗೀತೆಯೊಂದಿಗೆ ಗಾಯನಕ್ಕೆ ತೆರೆ ಎಳೆದರು.

ಬಳಿಕ ವೇದಿಕೆ ಪ್ರವೇಶಿಸಿದ ಸಂಗೀತ ನಿರ್ದೇಶಕ ರವಿ ಬಸ್ರೂರ ಅವರು, ತಮಗೆ ಜನಪ್ರಿಯತೆ ತಂದುಕೊಟ್ಟ ಉಗ್ರಂ ಸಿನಿಮಾದ ‘ರಣ ರಣ ರಣ ಉಗ್ರಂ ವೀರರ’ ಹಾಡಿನೊಂದಿಗೆ ಆರ್ಭಟಿಸಿದರು. ಕೆಜಿಎಫ್ ಸಿನಿಮಾದ ‘ಜಿದ್ದಿ ಜಿದ್ದಿ ಹೇ ತೂಫಾನ್’ ಹಾಡಿನೊಂದಿಗೆ ಸಹಸ್ರಾರು ಜನರ ಸಮ್ಮುಖದಲ್ಲಿ ಸಂಗೀತವನ್ನು ಉಕ್ಕಿಸಿದರು.

ಸಂಗೀತ ಪಯಣ ಆರಂಭವಾಗಿದ್ದು ಮೈಸೂರಿನಿಂದ:


ಹೀಗೆ ಗಾಯನದ ನಡುವೆ ಮಾತನಾಡಿದ ಅವರು, ‘ನನ್ನ ಸಂಗೀತ ಪಯಣ ಆರಂಭವಾಗಿದ್ದು ಮೈಸೂರಿನಿಂದ. ಇಲ್ಲಿ ಮೊದಲು ಭಕ್ತಿ ಗೀತೆಯನ್ನು ಹಾಡಿದ್ದೆ. ಬಳಿಕ ವಿವಿಧ ಸಂಗೀತ ಕಾರ್ಯಕ್ರಮಗಳು ಸಾಂಸ್ಕೃತಿಕ ನಗರಿಯಲ್ಲೇ ನಡೆದಿವೆ. ಹೀಗಾಗಿ, ನನ್ನ ಜೀವನದಲ್ಲಿ ಮೈಸೂರಿಗೆ ವಿಶೇಷ ಸ್ಥಾನ ಇದೆ’ ಎಂದು ಹೇಳಿದರು. ಬಳಿಕ ಗೀತಗಾಯನ ಮುಂದುವರಿಸಿದ ಅವರು, ಸಭಿಕರನ್ನು ರಂಜಿಸಿದರು. ಇವರೊಂದಿಗೆ ಸಂತೋಷ್ ವೆಂಕಿ, ಐರಾ ಉಡುಪಿ ಆಚಾರ್ಯ ಸಹ ಹಾಡಿನ ನಾದಲೀಲೆಯನ್ನು ಎಬ್ಬಿಸಿದರು. ಇದರಲ್ಲಿ ಪ್ರೇಕ್ಷಕರೂ ಮಿಂದೆದ್ದರು.

ಇದಕ್ಕೂ ಮುನ್ನ, ಅಂಗವಿಕಲರು ‘ಬಾರಿಸು ಕನ್ನಡ ಡಿಂಡಿಮವ’ ಗೀತೆಗೆ ನೃತ್ಯ, ನಜರ್‌ಬಾದ್‌ನ ವಾಣಿ ವಿಲಾಸ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿಯರಿಂದ ನಾಲ್ವಡಿ ಕಥನಕ್ಕೆ ನೃತ್ಯ ರೂಪಕ, ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳಿಂದ ಜಾನಪದ ಕಲೆಯ ಸೊಗಡು, ಮೈಸೂರಿನ ನೃತ್ಯ ತರಬೇತುದಾರರಿಂದ ಅಬ್ಬರದ ಸಂಗೀತ ಗೀತೆಗಳಿಗೆ ಬಿರುಸಿನ ಡ್ಯಾನ್ಸ್ ಮಾಡಿ ಮನರಂಜನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net