ಕಾಲೇಜು ಪಕ್ಕದ ಕ್ಯಾಂಟಿನ್ ಬಳಿ ಧೂಮ ಲೀಲೆ

FotoJet
Published on

ವಿದ್ಯಾರ್ಥಿಗಳ ಚಟ ಕಂಡು ಬೆಚ್ಚಿಬಿದ್ದ ತಹಸೀಲ್ದಾರ್ಕಾ | ಲೇಜು ಆಡಳಿತದ ವಿರುದ್ಧ ಗರಂ

ಗೌರಿಬಿದನೂರು : ನಗರದ ನ್ಯಾಷನಲ್ ಕಾಲೇಜಿನ ಪಕ್ಕದಲ್ಲಿರುವ ಟೀ ಕ್ಯಾಂಟಿನ್‌ನಲ್ಲಿ ಕಂಡು ಬಂದ ಧೂಮ ಲೀಲೆ ತಾಲೂಕಿನ ತಹಸೀಲ್ದಾರ್ ಅವರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ತಹಸೀಲ್ದಾರ್ ಮಹೇಶ್ ಎಸ್. ಪತ್ರಿ ಅವರು ಬುಧವಾರ ಅಚಾನಕ್ಕಾಗಿ ಕಾಲೇಜಿಗೆ ಭೇಟಿ ನೀಡಿದಾಗ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಗರೇಟ್ ಸೇದುತ್ತಿದ್ದುದನ್ನು ಕಂಡು ನಿಬ್ಬೆರಗಾಗಿದ್ದಾರೆ. ವಿದ್ಯಾರ್ಥಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ತಹಸೀಲ್ದಾರ್, ಕಾಲೇಜಿನ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸಿದರು.
ಶಾಲೆ ಕಾಲೇಜಿನ ಸುತ್ತ ಮಾದಕ ವಸ್ತುಗಳ ಮಾರಾಟ ಮಾಡುವಂತಿಲ್ಲ. ಆದರೂ ಕಾಲೇಜಿಗೆ ಹೊಂದಿಕೊಂಡಂತೆ ಇರುವ ಅಂಗಡಿಯಲ್ಲಿ ಇಷ್ಟೊಂದು ವಿದ್ಯಾರ್ಥಿಗಳು ಸಿಗರೇಟ್ ಸೇದುತ್ತಿದ್ದರೂ ಆಡಳಿತ ಮಂಡಳಿ ಏಕೆ ಕ್ರಮ ಕೈಗೊಂಡಿಲ್ಲ, ನಿಮ್ಮ ಗಮನಕ್ಕೆ ಬಂದಿಲ್ಲವೇ? ಮಕ್ಕಳ ಬಗ್ಗೆ ಕಾಳಜಿ ಇಲ್ಲವೇ? ಎಂದು ಪ್ರಶ್ನಿಸಿದರು. ಮುಂದೆ ಇದು ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಬಿಇಒ ಶ್ರೀನಿವಾಸ್ ಮೂರ್ತಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾಲೇಜು ಪ್ರಮುಖ ಘಟ್ಟವಾಗಿದೆ. ಚಂಚಲ ಮನಸ್ಸಿನಿಂದ ಹೊರಬಂದು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಅಡಿಪಾಯ ಹಾಕಿದಾಗ ಉನ್ನತ ಸ್ಥಾನ ತಲುಪಲು ಸಾಧ್ಯ. ಇದರಿಂದ ತಂದೆ ತಾಯಿಗೆ ಮತ್ತು ಸಮಾಜಕ್ಕೂ ಗೌರವ ಬರುತ್ತದೆ ಎಂದರು.
ನಗರಠಾಣೆ ಪಿಎಸ್‌ಐ ಗೋಪಾಲ್, ಕಾಲೇಜಿನ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net