

ಮೈಸೂರು: ಮಳೆಯಿಂದ ರಾಜ್ಯದ ಜನರು ಸಂಕಷ್ಟದಲ್ಲಿರುವ ಸಂದರ್ಭ ಬಿಜೆಪಿ ‘ಜನಸ್ಪಂದನ’ ಹೆಸರಿನಲ್ಲಿ ಸಮಾವೇಶ ಆಯೋಜಿಸಿ ಮೋಜು ಮಸ್ತಿ ನಡೆಸಿದ್ದು, ಜನರು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳಿದರು.
ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿತು. ಶೋಕಾಚರಣೆ ಮುಗಿಯುತ್ತಿದ್ದಂತೆಯೇ ಬಿಜೆಪಿ ಜನಸ್ಪಂದನ ಸಮಾವೇಶ ನಡೆಸಿ ಆ ವೇದಿಕೆಯಲ್ಲಿ ಬಿಜೆಪಿ ಶಾಸಕರು ಕುಣಿದು ಸಂಭ್ರಮಿಸಿದರು. ಉಮೇಶ್ ಕತ್ತಿ ನಿಧನ, ಮಳೆಯಿಂದ ಜನರು ಸಂಕಷ್ಟದಲ್ಲಿರುವ ಸಂದರ್ಭ ಈ ಮೋಜು ಮಸ್ತಿ ಬೇಕಾಗಿತ್ತಾ? ಜನರು ಸಂಕಷ್ಟದಲ್ಲಿರು ವಾಗ ಬಿಜೆಪಿ ರೋಮ್ ದೊರೆಯ ಮಾದರಿಯಲ್ಲಿ ಪಿಟೀಲು ಬಾರಿಸುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಜನರಿಗೆ ಸ್ಪಂದಿಸುವ ಕಾರ್ಯವನ್ನು ಬಿಜೆಪಿ ಮಾಡಲಿಲ್ಲ. ಬದಲಿಗೆ ಸಮಾವೇಶವನ್ನು ಕಾಂಗ್ರೆಸ್ ವಿರುದ್ಧ ಟೀಕೆಗೆ ಬಳಕೆ ಮಾಡಿತು. ಮೊದಲು ಬಿಜೆಪಿ ಜನೋತ್ಸವ ಮಾಡಲು ಹೊರಟಿತು. ಆದರೆ, ನಂತರ ಅದನ್ನು ಏತಕ್ಕೆ ಜನಸ್ಪಂದನ ಎಂದು ಬದಲಾಯಿಸಿದರೋ ತಿಳಿಯದು. ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಹುದ್ದೆಯ ಘನತೆಗೆ ತಕ್ಕಂತೆ ಮಾತನಾಡಿಲ್ಲ. ‘ನಿಮಗೆ ತಾಕತ್ತಿದ್ದರೆ, ಧಮ್ಮಿದ್ದರೆ’ ಎಂಬ ಪದ ಬಳಕೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು 100 % ಸರ್ಕಾರ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ನಡೆಸಿದ್ದರೆ ಪ್ರತಿಪಕ್ಷದಲ್ಲಿ ಇದ್ದ ನೀವು ಆ ಸಂದರ್ಭ ಏತಕ್ಕೆ ಪ್ರಶ್ನಿಸಲಿಲ್ಲ. ಕೇಂದ್ರದಲ್ಲೂ ನಿಮ್ಮದೇ ಸರ್ಕಾರ ಇತ್ತು. ಏತಕ್ಕೆ ಸಿಬಿಐ ತನಿಖೆಗೆ ಆಗ್ರಹಿಸಲಿಲ್ಲ. ಕನಿಷ್ಠ ಈಗಾದರೂ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸಿದರು.