

ಹನೂರು: ತಾಲೂಕಿನ ಗಡಿ ಗ್ರಾಮ ಗೋಪಿನಾಥಂನಲ್ಲಿ ಸರ್ಕಾರಿ ಆಸ್ಪತ್ರೆ ಸ್ಥಾಪನೆಗೆ ಸ್ಥಳ ಪಡೆಯುವ ಸಂಬಂಧ ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರಂ ಅವರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದರು.
ಗೋಪಿನಾಥಂ ಗ್ರಾಮವು ತಾಲೂಕಿನ ಗಡಿಯಾಗಿದ್ದು, ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದೆ. ಇದರ ವ್ಯಾಪ್ತಿಯಲ್ಲಿ ಕಾಡಂಚಿನಲ್ಲಿರುವ ಪುದುಕಾಡು, ತೇಂಗಕೊಂಬು, ಪುಂಗಂ, ಅಪ್ಪುಕಾಪಟ್ಟಿ, ಜಂಬೂಕಪಟ್ಟಿ, ಮಾರಿಕೋಟೆ ಹಾಗೂ ಆಲಂಬಾಡಿ ಗ್ರಾಮಗಳು ಸೇರಿದ್ದು, ಇಲ್ಲಿನ ಜನರು ಹಲವು ದಶಕದಿಂದಲೂ ವಾಸಿಸುತ್ತಿದ್ದಾರೆ. ಆದರೆ, ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯವಿಲ್ಲ. ಜತೆಗೆ ಆರೋಗ್ಯ ಉಪಕೇಂದ್ರವಿದ್ದರೂ ಸಿಬ್ಬಂದಿ ಇಲ್ಲದ ಪರಿಣಾಮ ಆರೋಗ್ಯ ಸೇವೆ ಸಿಗುತ್ತಿಲ್ಲ. ಇದರಿಂದ ಈ ಭಾಗದ ಜನರು ಚಿಕಿತ್ಸೆ ಪಡೆಯಬೇಕಾದರೆ 40 ಕಿಮೀ ದೂರದ ಮಹದೇಶ್ವರ ಬೆಟ್ಟ ಇಲ್ಲವೇ ತಮಿಳುನಾಡಿನ ಅಂದಿಯೂರಿಗೆ ತೆರಳಬೇಕಿದೆ. ಹಾಗಾಗಿ ಆರೋಗ್ಯ ಸೇವೆ ಈ ಭಾಗಕ್ಕೆ ಮರಿಚೀಕೆಯಾಗಿದ್ದು, ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಭಾಗದಲ್ಲಿ ಆಸ್ಪತ್ರೆ ತೆರೆಯುವಂತೆ ಗ್ರಾಮಸ್ಥರು ಒತ್ತಾಯಿಸುತ್ತಲೇ ಇದ್ದರು. ಜತೆಗೆ ಕಳೆದ ತಿಂಗಳು ತಾಲೂಕು ರೈತ ಸಂಘದ ಪದಾಧಿಕಾರಿಗಳು ಗೋಪಿನಾಥಂನಲ್ಲಿ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರನ್ನು ಭೇಟಿಯಾಗಿ ಆಸ್ಪತ್ರೆ ತೆರೆಯುವಂತೆ ಮನವಿ ಸಲ್ಲಿಸಿದ್ದರು.
ಹಾಗಾಗಿ ಶನಿವಾರ ಡಿಎಚ್‌ಒ ಡಾ. ಚಿದಂಬರಂ, ಟಿಎಚ್‌ಒ ಡಾ.ಪ್ರಕಾಶ್ ಹಾಗೂ ಇನ್ನಿತರೆ ಅಧಿಕಾರಿಗಳ ತಂಡ ಗೋಪಿನಾಥಂಗೆ ಭೇಟಿ ನೀಡಿದರು. ಜನರ ಆರೋಗ್ಯದ ಬಗ್ಗೆ ವಿಚಾರಿಸಿದರು. ಅಗತ್ಯ ಸಲಹೆಯನ್ನು ನೀಡಿದರು. ಬಳಿಕ ಗ್ರಾಪಂ ಕಚೇರಿಗೆ ತೆರಳಿದ ಅವರು ಆಸ್ಪತ್ರೆ ಸ್ಥಾಪನೆ ಸಂಬಂಧ ಜಾಗ ನೀಡುವಂತೆ ಸೂಚಿಸಿದರು. ಈ ವೇಳೆ ಪಿಡಿಒ ರಾಜ್‌ಕುಮಾರ್ ಅವರು ಮಾತನಾಡಿ, ಆಸ್ಪತ್ರೆ ಸ್ಥಾಪನೆಗೆ ಸ್ಥಳ ನೀಡುವ ಸಂಬಂಧ ಈಗಾಗಲೇ ಸಭೆಯಲ್ಲಿ ಚರ್ಚಿಸಲಾಗಿದ್ದು, 80 ಸೆಂಟ್ ಜಾಗವನ್ನು ನೀಡುವುದಾಗಿ ಭರವಸೆ ನೀಡಿದರು. ಈ ಸಂಬಂಧ ಅಗತ್ಯ ಮಾಹಿತಿಯನ್ನು ಪಡೆಯಲಾಯಿತು.
2ನೇ ಪ್ರಸ್ತಾವನೆ ಸಲ್ಲಿಕೆಗೆ ಕ್ರಮ: ಡಿಎಚ್‌ಒ ಡಾ. ಚಿದಂಬರಂ ಅವರು ವಿಜಯವಾಣಿಯೊಂದಿಗೆ ಮಾತನಾಡಿ, ಮ.ಬೆಟ್ಟದಲ್ಲಿ ಸರ್ಕಾರಿ ಆಸ್ಪತ್ರೆ ಇದೆ. ಆದರೆ, ಈ ಭಾಗದ ಜನರು ಕೆಲವು ಮೂಲಸೌಕರ್ಯದ ಕೊರತೆಯಿಂದ ಇಲ್ಲಿಗೆ ತೆರಳಿ ಚಿಕಿತ್ಸೆ ಪಡೆಯಲು ತೊಂದರೆಪಡುತ್ತಿದ್ದರು. ಇದರಿಂದ ಗೋಪಿನಾಥಂನಲ್ಲಿ ಆಸ್ಪತ್ರೆ ತೆರೆಯುವಂತೆ ಗ್ರಾಮಸ್ಥರಿಂದ ಬೇಡಿಕೆ ಇತ್ತು. ಈ ಬಗ್ಗೆ ಅಗತ್ಯ ಕ್ರಮವಹಿಸಿ ಕಳೆದ 7 ತಿಂಗಳ ಹಿಂದೆ ಗ್ರಾಪಂಗೆ ಭೇಟಿ ನೀಡಿ ಸ್ಥಳ ನೀಡುವಂತೆ ತಿಳಿಸಲಾಗಿತ್ತು. ಜತೆಗೆ ಆಸ್ಪತ್ರೆ ಸ್ಥಾಪನೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿತ್ತು. ಇದೀಗ 80 ಸೆಂಟ್ ಜಾಗ ನೀಡಲು ಪಂಚಾಯಿತಿ ಒಪ್ಪಿಗೆ ನೀಡಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗಿ ಆಸ್ಪತ್ರೆ ಸ್ಥಾಪನೆಗೆ ಅಗತ್ಯ ಭರವಸೆ ನೀಡಿದ್ದಾರೆ. ಹಾಗಾಗಿ ಈ ಬಗ್ಗೆ ಮುತುರ್ವಜಿ ವಹಿಸಿ 2ನೇ ಬಾರಿಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು. ಬಿಡುಗಡೆಯಾದ ಅನುದಾನದಲ್ಲಿ ಆಸ್ಪತ್ರೆಗೆ ಸ್ಥಾಪನೆಗೆ ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.