ಕ್ಯಾತಘಟ್ಟ ಗ್ರಾಮದಲ್ಲಿ ಎಂಟು ಜನರಿಗೆ ಭೇದಿ: ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಭೇಟಿ, ಪರಿಶೀಲನೆ

DHO visit to Kathaghatta village Mandya
Published on

ಮಂಡ್ಯ: ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ಸಮೀಪದ ಕ್ಯಾತಘಟ್ಟ ಗ್ರಾಮದಲ್ಲಿ ಕೆಲ ದಿನದಿಂದ ಸುಮಾರು ಎಂಟು ಜನರಿಗೆ ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಿನಕ್ಕೆ ಇಬ್ಬರಂತೆ ವಾರದಿಂದೀಚೆಗೆ ಗ್ರಾಮದ ಒಂದೇ ಬೀದಿಯ ಹಲವರಿಗೆ ಭೇದಿ ಕಾಣಿಸಿಕೊಂಡಿತು. ಈ ಪೈಕಿ ಒಬ್ಬರು ತೀವ್ರ ಅಸ್ವಸ್ಥಗೊಂಡಿದ್ದ ಕಾರಣ ಮೈಸೂರಿಗೆ ರವಾನಿಸಲಾಗಿದೆ. ಆದರೆ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಹಾಗೂ ಮದ್ದೂರು ನೋಡೆಲ್ ಅಧಿಕಾರಿ ಡಾ.ಜಿ.ಟಿ.ಬೆಟ್ಟಸ್ವಾಮಿ ಭೇಟಿ ನೀಡಿದರು.
ಪೈಪ್‌ಲೈನ್‌ನ ಕೊಳಕಿನಿಂದ ಜನರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿರಬಹುದೆಂದು ಶಂಕಿಸಿ ನೀರನ್ನು ಪರಿಶೀಲನೆಗೊಳಪಡಿಸಲಾಯಿತು. ಆದರೆ ಪರೀಕ್ಷೆಯಲ್ಲಿ ನೀರಿನಿಂದ ಯಾವುದೇ ಸಮಸ್ಯೆಯಾಗಿಲ್ಲ ಎನ್ನುವ ವರದಿ ಬಂದಿದೆ. ಇನ್ನು ನರೇಗಾ ಯೋಜನೆಯಡಿ ಕೆಲಸಕ್ಕೆ ಹೋಗಿದ್ದಾರೆ. ಅಂತೆಯೇ ಅಲ್ಲಿಯೇ ಬೆಳೆದಿದ್ದ ಅಡುಗೆಗೆಂದು ಬಳಸುವ ಸೊಪ್ಪನ್ನು ತಂದಿದ್ದಾರೆ. ಇದನ್ನು ಸರಿಯಾಗಿ ತೊಳೆಯದೇ ಅಥವಾ ಬೇಯಿಸದೇ ಸೇವಿಸಿರುವ ಪರಿಣಾಮ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿರಬಹುದೆಂದು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಆದಾಗ್ಯೂ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ತೆರೆಯಲಾಗಿದೆ. ಜತೆಗೆ ಒಂದು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಕುಡಿಯುವ ನೀರು ಹಾಗೂ ಸೊಪ್ಪುಗಳನ್ನು ಬೇಯಿಸಿ ತಿನ್ನುವುದು ಸೇರಿದಂತೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಇನ್ನಷ್ಟು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುವಂತೆ ಗುರುದೇವರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್, ಮದ್ದೂರು ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ ಇತರರಿದ್ದರು.

ಕ್ಯಾತಘಟ್ಟ ಗ್ರಾಮದಲ್ಲಿ ಕೆಲವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ಕುಡಿಯುವ ನೀರಿನಿಂದಾಗಿ ಸಮಸ್ಯೆ ಆಗಿರಬಹುದೆಂಬ ಕಾರಣಕ್ಕೆ ಪರೀಕ್ಷೆ ಮಾಡಿಸಲಾಯಿತು. ಆದರೆ ಯಾವುದೇ ತೊಂದರೆ ಇಲ್ಲವೆಂದು ವರದಿ ಬಂದಿದೆ. ಸೊಪ್ಪನ್ನು ಸರಿಯಾಗಿ ಬೇಯಿಸದೇ ಸೇವಿಸಿರುವುದರಿಂದ ಭೇದಿಯಾಗಿರಬಹುದೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆದರೂ ಮತ್ತೊಮ್ಮೆ ಕುಡಿಯುವ ನೀರನ್ನು ಪರಿಶೀಲನೆಗೊಳಪಡಿಸಲಾಗುವುದು. ಅಂತೆಯೇ ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ತೆರೆಯಲಾಗಿದೆ.ಡಾ.ಕೆ.ಮೋಹನ್ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net