

ಕೆ.ಎಂ.ದೊಡ್ಡಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್ ಧಿಡೀರ್ ಭೇಟಿ ನೀಡಿ ಪರಿಶೀಲಿಸಿದರು.
ನೂತನ ಕಟ್ಟಡದ ಹೆಚ್ಚುವರಿ ವಾರ್ಡ್‌ನಲ್ಲಿ ಸೋರಿಕೆ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದ ಅವರು, ಛಾವಣಿಯನ್ನು ಸರಿಪಡಿಸಿ ಸೋರಿಕೆಯಾಗದಂತೆ ಸೂಕ್ತ ಕ್ರಮ ವಹಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ನೂತನವಾಗಿ ನಿರ್ಮಿಸಿರುವ ಕಟ್ಟಡ ಸೋರಿಕೆಯಾಗುತ್ತಿದ್ದರೂ ಅಗತ್ಯ ಕ್ರಮವಹಿಸಿಲ್ಲ. ಕಾಮಗಾರಿ ನಡೆಯುತ್ತಿದ್ದ ವೇಳೆ ಭೇಟಿ ನೀಡಿ ಪರಿಶೀಲಿಸಬೇಕಾಗಿತ್ತು ಎಂದು ಜಿ.ಪಂ. ಇಂಜಿನಿಯರ್‌ಗಳಿಗೆ ತರಾಟೆ ತೆಗೆದುಕೊಂಡರು.
ಆಸ್ಪತ್ರೆ ಮತ್ತಷ್ಟು ಸುಧಾರಣೆಯಾಗಬೇಕು. ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಔಷಧ ದೊರೆಯಲು ಅಗತ್ಯ ಕ್ರಮವಹಿಸಬೇಕು ಎಂದು ಸ್ಥಳದಲ್ಲಿದ್ದ ರೋಗಿಗಳು ಡಿಎಚ್‌ಒ ಅವರಲ್ಲಿ ಮನವಿ ಮಾಡಿದರು. ಬಳಿಕ ಆಸ್ಪತ್ರೆಯ ಪ್ರತಿ ವಾರ್ಡನ್ನು ಪರಿಶಿಲಿಸಿದ ಅವರು, ಆಸ್ಪತ್ರೆಯನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು. ಗ್ರಾಮೀಣ ಪ್ರದೇಶದ ರೋಗಿಗಳಿಗೆ ಅಗತ್ಯ ಸೇವೆ ಕಲ್ಪಿಸಿ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಜಗದೀಶ್ ಅವರಿಗೆ ಸೂಚಿಸಿದರು.
ಜಿ.ಪಂ. ಮಾಜಿ ಸದಸ್ಯ ಎ.ಎಸ್. ರಾಜೀವ್, ಆಡಳಿತ ವೈದ್ಯಾಧಿಕಾರಿ ಡಾ. ಜಗದೀಶ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಅರ್ಜುನ್‌ಕುಮಾರ್, ಡಾ.ಆನಂದ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ತೊರೆಬೊಮ್ಮನಹಳ್ಳಿ ಸಿದ್ದರಾಮೇಗೌಡ, ಚನ್ನಶೆಟ್ಟಿ, ಗುಡಿಗೆರೆ ಪ್ರಸಾದ್, ಮೆಣಸಗೆರೆ ಪ್ರಕಾಶ್, ಜಿ.ಪಂ ಇಂಜಿನಿಯರ್‌ಗಳಾದ ಎಇಇ ನರಸಿಂಹಮೂರ್ತಿ, ಎಇ ಶಂಕರ್ ಸೇರಿದಂತೆ ಮತ್ತಿತರರಿದ್ದರು.