

ರಾಯಚೂರು ನಗರವನ್ನು ಸ್ವಚ್ಛ ಹಾಗೂ ಹಸಿರುಗೊಳಿಸುವ ಉದ್ದೇಶದಿಂದ ರಾಯಚೂರು ನಗರ ಪಾಲಿಕೆ ವತಿಯಿಂದ ಸಿಟಿ ಫಾರ್ ಯೂಥ ಆ್ಯಂಡ್ ಯೂಥ್ ಫಾರ್ ಸಿಟಿ ಯೋಜನೆಯಡಿ ಹಮ್ಮಿಕೊಂಡ ಮ್ಯಾರಥಾನ್ ಕಾರ್ಯಕ್ರಮವನ್ನು ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ ನಾಯಕ ಚಾಲನೆ ನೀಡಿದರು.
ಈ ವೇಳೆ ಡಿಎಚ್‌ಓ ಡಾ.ಸುರೇಂದ್ರ ಬಾಬು ಮಾತನಾಡಿ, ಆರೋಗ್ಯಕರ ಜೀವನಶೈಲಿ ಮತ್ತು ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದು ನಮ್ಮ ಉದ್ದೇಶ. ಈ ರೀತಿಯ ಸಮುದಾಯ ಕಾರ್ಯಕ್ರಮಗಳು ಆರೋಗ್ಯ ಮತ್ತು ಜಾಗೃತಿಯ ಸಂದೇಶವನ್ನು ತಲುಪಿಸಲು ಈ ಕಾರ್ಯಕ್ರಮವು ಉತ್ತಮ ವೇದಿಕೆಯಾಗಿದೆ.
ಯುವಜನರನ್ನು ಒಳಗೊಳ್ಳುವುದಾಗಿದೆ. ಹೆಚ್ಚಿನ ಕಾರ್ಯಕ್ರಮಗಳನ್ನು ಯೋಜಿಸುವಲ್ಲಿ ಪಾಲಿಕೆ ಮತ್ತು ಇತರೆ ಸಂಸ್ಥೆಗಳನ್ನು ಪ್ರೋತ್ಸಾಹಿಸುವುದಾಗಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗಿ ಆಯಸ್ಸನ್ನು ಕಳೆದುಕೊಳ್ಳದೆ, ಉತ್ತಮ ರೀತಿಯಲ್ಲಿ ಜೀವನ ಸಾಗಿಸಿ ಸಾಧನೆ ಮಾಡುವ ಕಡೆ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.
ಓಟವು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭಗೊಂಡು ಅಂಬೇಡ್ಕರ್ ವೃತ್ತ, ಸ್ಟೇಷನ್ ವೃತ್ತ, ನವೀನ ಆಸ್ಪತ್ರೆ ಅಲ್ಲಿಂದ ಮರಳಿ ಸ್ಟೇಷನ್ ಸರ್ಕಲ್, ಕ್ರೀಡಾಂಗಣ ಮಾರ್ಗವಾಗಿ ಓಟವನ್ನು ಪೂರ್ಣಗೊಳಿಸಿದರು.
ಈ ಮ್ಯಾರಥಾನ್‌ನಲ್ಲಿ 17 ರಿಂದ 35 ವರ್ಷದೊಳಗಿನ ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದು, ಯುವಜನರ ಉತ್ಸಾಹದಿಂದ ಕಾರ್ಯಕ್ರಮಕ್ಕೆ ಹಬ್ಬದ ವಾತಾವರಣ ಸೃಷ್ಟಿಯಾಯಿತು. ವಿಜೇತರಿಗೆ ನಗದು ಬಹುಮಾನಗಳನ್ನೂ ನೀಡಲಾಗಿದ್ದು, ಮೊದಲ ಸ್ಥಾನಕ್ಕೆ 5,000 ರೂ. ಎರಡನೇ ಸ್ಥಾನಕ್ಕೆ 3,500 ರೂ. ಹಾಗೂ ಮೂರನೇ ಸ್ಥಾನಕ್ಕೆ 2,500ರೂ. ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರವೀಣ್ ಕುಮಾರ್, ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಎಂ.ಡಿ.ಶಾಕೀರ್,ವಿಜ್ಞಾನ ಕೇಂದ್ರದ ಅಜಿತ್ ಅಂಗಡಿ ಸೇರಿದಂತೆ ಪಾಲಿಕೆಯ ವಿವಿಧ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.