

ಚಿಕ್ಕಮಗಳೂರು: ಉದ್ಯೋಗ ಕಾಯಂಗೊಳಿಸಿ ಕಾಯಂ ನೌಕರರ ವೇತನಕ್ಕೆ ಸಮಾನ ಸಂಬಳ, ಆರೋಗ್ಯ ಭದ್ರತೆ ಮತ್ತಿತರ ಸೇವಾ ಸೌಲಭ್ಯ ನೀಡದಿದ್ದರೆ ಒಂದು ವಾರ ಕೆಲಸ ಸ್ಥಗಿತಗೊಳಿಸಿ ಸಾಮೂಹಿಕ ರಾಜೀನಾಮೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಕಿರಿಯ ಸಹಾಯಕಿಯರು ಡಿಎಚ್ಒ ಡಾ. ಎಸ್.ಎನ್.ಉಮೇಶ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
2007-08 ನೇ ಸಾಲಿನಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಕಾಯಂ ನೇಮಕಾತಿ ಪ್ರಕ್ರಿಯೆಯಲ್ಲಿಯೇ ನಿಯೋಜಿಸಿ ತರಬೇತಿ ನೀಡಿದ್ದಾರೆ. ಆದರೆ ಈವರೆಗೂ ಕಾಯಂ ಮಾಡಿಲ್ಲ. ಕರೊನಾ ಭೀತಿ ನಡುವೆಯೂ ಆಸ್ಪತ್ರೆಯಲ್ಲಿ ಜೀವ ಬಿಗಿಹಿಡಿದು ಕೆಲಸ ಮಾಡುತ್ತಿದ್ದರೂ ಸರ್ಕಾರ ಸಮಾನ ವೇತನ, ಸೇವಾ ಸೌಲಭ್ಯ, ಆರೋಗ್ಯ ಭದ್ರತೆ ನೀಡದೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
ಕರೊನಾ ಕರ್ತವ್ಯದಿಂದ ನಮಗೆ ರಿಸ್ಕ್ ಭತ್ಯೆ ನೀಡಬೇಕು. ಸಮವಸ್ತ್ರ, ವಸತಿಗೃಹ ಹಾಗೂ ಅಗತ್ಯ ಮೂಲ ಸ್ವಯಂ ರಕ್ಷಣಾ ಪರಿಕರಗಳನ್ನು ವಿತರಿಸಬೇಕು. ಇಲ್ಲವಾದಲ್ಲಿ ಒಂದು ವಾರ ಕೆಲಸ ಸ್ಥಗಿತಗೊಳಿಸಲಾಗುವುದು. ನಮ್ಮ ಬೇಡಿಕೆ ಈಡೇರಿಸದಿದ್ದರೆ ನಗರದ 65 ಮತ್ತು ಜಿಲ್ಲೆಯ 165 ಕಿರಿಯ ಆರೋಗ್ಯ ಸಹಾಯಕಿಯರು ಸಾಮೂಹಿಕ ರಾಜೀನಾಮೆ ಸಲ್ಲಿಸುತ್ತೇವೆ ಎಂದು ಎಚ್ಚರಿಸಿದರು.