

ತುಮಕೂರು: ಮತ್ತೊಬ್ಬರ ಜೀವ ಉಳಿಸಲು ಸಾಧ್ಯವಾಗುವ ರಕ್ತದಾನಕ್ಕೆ ಎಲ್ಲರೂ ಮನಸ್ಸು ಮಾಡಬೇಕು ಎಂದು ಡಿಎಚ್‌ಒ ಡಾ.ನಾಗೇಂದ್ರಪ್ಪ ಹೇಳಿದರು.
ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕೇಂದ್ರ ಕಚೇರಿಯಲ್ಲಿ ಜಿಲ್ಲಾಡಳಿತ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ರಕ್ತದಾನಿಗಳ ದಿನಾಚರಣೆಯಲ್ಲಿ ಮಾತನಾಡಿದರು.
ಅಪಘಾತವಾದ ಸಂದರ್ಭದಲ್ಲಿ ವ್ಯಕ್ತಿಯ ಜೀವ ಉಳಿಯಲು ರಕ್ತದ ಅವಶ್ಯತೆಯಿರುತ್ತದೆ, ಜನರು ರಕ್ತದಾನ ಮಾಡಿದರೆ ಒಂದು ಜೀವ ಉಳಿಸಬಹುದು. ಇದನ್ನು ಯಾರೂ ಮರೆಯಬಾರದು ಎಂದರು. ಮನುಷ್ಯನಿಗೆ ಆರೋಗ್ಯ, ಜೀವ ಮುಖ್ಯ. ಕೇವಲ ದುಡ್ಡಿನಿಂದ ಆರೋಗ್ಯ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ರಕ್ತದಾನ ಶಿಬಿರಗಳು ವ್ಯಕ್ತಿಗಳ ಪ್ರಾಣ ಉಳಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ. ಇಂತಹ ಶಿಬಿರಗಳಲ್ಲಿ ಸಂಗ್ರಹಿಸಿದ ರಕ್ತ ಸದುಪಯೋಗವಾಗಬೇಕು. ಯಾವುದೇ ಕಾರಣಕ್ಕೂ ದುರುಪಯೋಗಕ್ಕೆ ಅವಕಾಶ ನೀಡಬಾರದು ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ಮಾತನಾಡಿ, ರಕ್ತದಾನಿಗಳ ದಿನಾಚರಣೆ ವಿಶ್ವದಾದ್ಯಂತ ಆಚರಿಸಲಾಗುತ್ತಿದ್ದು, 2004ರಿಂದ ರಕ್ತದಾನಿಗಳನ್ನು ಗುರುತಿಸಿ ರಕ್ತದಾನ ಮಾಡಲು ಪ್ರೋತ್ಸಾಹಿಸಲಾಗುತ್ತಿದೆ ಎಂದರು. ಜಿಲ್ಲಾಸ್ಪ್ರತ್ರೆಯಲ್ಲಿ ಈಗ ರಕ್ತದ ವಿವಿಧ ಭಾಗಗಳನ್ನು ಪ್ರತ್ಯೇಕಿಸುವ ಘಟಕ ಸ್ಥಾಪಿಸಲಾಗಿದೆ. ಈ ಹಿಂದೆ ಸೌಲಭ್ಯ ಇರಲಿಲ್ಲ ಎಂದ ಅವರು, ಕರೊನಾ ನಿಯಂತ್ರಣದಲ್ಲಿ ಜಿಲ್ಲಾಡಳಿತ ಅವಿರತವಾಗಿ ಶ್ರಮಿಸುತ್ತಿದೆ ಎಂದರು. ರಕ್ತದಾನ ಮಾಡಿ ಮಾತನಾಡಿದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಜಿ.ಕೆ.ಸನತ್ ಕುಮಾರ್, ರಕ್ತವನ್ನು ಆರೋಗ್ಯವಂತ ಮನುಷ್ಯರು ದಾನ ಮಾಡಬೇಕು. ಸುರಕ್ಷಿತ ರಕ್ತ ಜೀವ ರಕ್ಷಕ ಎಂಬುದನ್ನು ಯಾರೂ ಮರೆಯಬಾರದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ಡಾ.ವೀಣಾ, ಡಾ.ಕೇಶವರಾಜ್, ಡಾ.ಮೋಹನದಾಸ್, ರಾಜ್ಯ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಪತಿ ಎಸ್. ನಾಗಣ್ಣ, ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಗದೀಶ್ ಇದ್ದರು.
ಪರಸ್ಪರ ಅಂತರದ ಬಗ್ಗೆ ಭಾಷಣ ಮಾಡಿ ಗುಂಪಾಗಿ ನಿಂತರು!: ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರ ಸಮ್ಮುಖ ಆರೋಗ್ಯ ಇಲಾಖೆ ನೇತೃತ್ವದಲ್ಲಿ ಸಮಾರಂಭ ನಡೆದಿದ್ದರೂ ಸಮಾರಂಭದ ಕೊನೆಯಲ್ಲಿ ೆಟೋ ತೆಗೆಯುವಾಗ ಪರಸ್ಪರ ಅಂತರ ಕಾಪಾಡಿಕೊಳ್ಳುವುದನ್ನು ಎಲ್ಲರೂ ಮರೆತರು. ಸಮಾರಂಭದಲ್ಲಿ ಕರೊನಾ ನಿಯಂತ್ರಣದ ಸಂದರ್ಭದಲ್ಲಿ ಪರಸ್ಪರ ಅಂತರದ ಮಹತ್ವದ ಬಗ್ಗೆ ಮಾತನಾಡಿದ ತಜ್ಞರೇ ೆಟೋ ತೆಗೆಸಿಕೊಳ್ಳುವಾಗ ಒಬ್ಬರ ಪಕ್ಕ ಮತ್ತೊಬ್ಬರು ನಿಂತು ಗುಂಪಿನಲ್ಲಿ ಭಾಗಿಯಾದರು.
ರಕ್ತದಾನಿಗಳಿಗೆ ಗೌರವರಕ್ತದಾನ ಮಾಡಿದ ಜಿ.ಕೆ.ಲೋಕೇಶ್, ಕೆ.ಶ್ರೀನಿವಾಸ್, ಟಿ.ಎಸ್. ಭರತ್‌ಕುಮಾರ್ ಅಣೇಕಾರ್, ವಿಕ್ರಂಶೆಟ್ಟಿ, ಸಿ.ಎನ್. ಶಶಿಧರ್, ವೇಣುಗೋಪಾಲ್ ಹಾಗೂ ಆರೋಗ್ಯ ಸಹಾಯಕಿ ಪಂಕಜಾಕ್ಷಿ ಅವರನ್ನು ಗೌರವಿಸಲಾಯಿತು. ಶಿಬಿರದಲ್ಲಿ 30ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು.