ಡಿಎಚ್‌ಒ ಡಾ.ಎಚ್.ಪಿ.ಮಂಚೇಗೌಡ ಮಾಹಿತಿ ನಗರದಲ್ಲಿ ಜಾಗೃತಿ ಜಾಥಾ

04_02_Mdy_Cancer Jatha 01
Published on

ಮಂಡ್ಯ: ಕ್ಯಾನ್ಸರ್‌ನಿಂದಾಗಿ ಪ್ರತಿ ವರ್ಷ ವಿಶ್ವದಲ್ಲಿ 96 ಲಕ್ಷ ಜನ ಸಾಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ತಿಳಿಸಿದರು.

ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಎನ್‌ಸಿಡಿ ಘಟಕ, ಎನ್‌ಎಸ್‌ಎಸ್ ಘಟಕ, ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಹಯೋಗದಲ್ಲಿ ಮಂಗಳವಾರ ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕದಲ್ಲಿ ಶೇ.25ರಷ್ಟು ಜನರು ತಂಬಾಕು ಸೇವನೆಯಿಂದ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಹೆಣ್ಣು ಮಕ್ಕಳು ಸಹ ವಿವಿಧ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಮೂಲಕ ರೋಗವನ್ನು ತಡೆಗಟ್ಟಲು ಮುಂದಾಗಿದ್ದೇವೆ. ಅಂತೆಯೇ, ಪ್ರತಿ ವರ್ಷ ಫೆ.4ರಂದು ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತಿದೆ ಎಂದರು.

ಆಹಾರ ಪದ್ಧತಿಯಲ್ಲಿ ಬದಲಾವಣೆ, ವ್ಯಾಯಾಮ ಮಾಡುವುದರ ಜತೆಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಸ್ವಚ್ಛತೆ ಕಾಪಾಡಿಕೊಂಡರೆ ರೋಗದಿಂದ ದೂರ ಇರಬಹುದು. ಈ ಬಗ್ಗೆ ಅರಿವು ಮೂಡಿಸಿ ಕ್ಯಾನ್ಸರ್ ಪ್ರಮಾಣ ಕಡಿಮೆ ಮಾಡಲು ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.

ಡಾ.ಭವಾನಿ ಶಂಕರ್, ಡಾ.ಸೋಮಶೇಖರ್, ಡಾ.ಅನಿಲ್‌ಕುಮಾರ್, ಡಾ.ಕೆ.ಪಿ.ಅಶ್ವಥ್, ಡಾ.ಹರೀಶ್, ಡಾ.ಜವರೇಗೌಡ, ಡಾ.ಶಿವಕುಮಾರಸ್ವಾಮಿ, ಡಾ.ವಿಜಯ ಹೂಗಾರ್, ಶಿವಾನಂದ, ಪ್ರೊ.ನಾರಾಯಣ ಇತರರಿದ್ದರು. ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ತೆರಳಿದ ಜಾಗೃತಿ ಜಾಥಾ ಡಿಎಚ್‌ಒ ಕಚೇರಿ ಮುಂದೆ ಮುಕ್ತಾಯವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net