ವೈದ್ಯರ ಸಲಹೆಯಂತೆ ಔಷಧ ಪಡೆಯಿರಿ ; ಶ್ರವಣ ದಿನಾಚರಣೆಯಲ್ಲಿ ಡಿಎಚ್‌ಒ ಡಾ.ಎಂ.ಬಿ.ನಾಗೇಂದ್ರಪ್ಪ ಸಲಹೆ

03TMK_Sravana_Dina
Published on

ತುಮಕೂರು ; ಯಾವುದೇ ಔಷಧವನ್ನು ವೈದ್ಯರ ಸಲಹೆ ಇಲ್ಲದೆ ಉಪಯೋಗಿಸುವುದರಿಂದ ಶ್ರವಣ ದೋಷಗಳಿಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ಡಿಎಚ್‌ಒ ಡಾ.ಎಂ.ಬಿ.ನಾಗೇಂದ್ರಪ್ಪ ತಿಳಿಸಿದರು. ಜಿಲ್ಲಾಡಳಿತದಿಂದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರವಣ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಔಷಧ ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸಬೇಕು ಎಂದರು.

ವಿ, ರೇಡಿಯೋ, ಇಯರ್ ಫೋನ್‌ನಂತಹ ಉಪಕರಣಗಳು ಹಾಗೂ ಇತರ ಜೋರಾದ ಶಬ್ಧಗಳಿಂದ ದೂರವಿರುವ ಮೂಲಕ ನಮ್ಮ ಕಿವಿಗಳನ್ನು ನಾವೇ ರಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಬಾರಿ ಜೀವನವಿಡೀ ಕೇಳಿಸಿಕೊಳ್ಳಲು ಜಾಗ್ರತೆಯಿಂದ ಆಲಿಸಿರಿ ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಶ್ರವಣ ದಿನ ಆಚರಿಸಲಾಗುತ್ತಿದೆ. ಕಿವಿ ಸೋರುವಿಕೆ, ಮರುಕಳಿಸುವ ನೋವು ಅಥವಾ ರಕ್ತಸ್ರಾವ, ಗಂಭೀರ ರೋಗ ಕಂಡು ಬಂದಲ್ಲಿ ಆರಂಭದಲ್ಲಿಯೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಶ್ರವಣದೋಷ ಪರೀಕ್ಷೆಗೊಳಗಾಗಿ ಚಿಕಿತ್ಸೆ ಪಡೆಯಬೇಕು ಎಂದರು.

ಶ್ರವಣ ದೋಷ 0-14 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಪಾಲಕರು ಮಕ್ಕಳ ಕೈಗೆ ಮೊಬೈಲ್ ಸಿಗದಂತೆ ಎಚ್ಚರವಹಿಸಬೇಕು. ಇಲ್ಲವಾದಲ್ಲಿ ಕಿವುಡುತನ ಹಾಗೂ ಕುರುಡುತನ ಎರಡೂ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಹುಟ್ಟಿನಿಂದ ಅಥವಾ ಮಧ್ಯದಲ್ಲಿ ಬರುವ ಶ್ರವಣ ದೋಷಕ್ಕೆ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದೆ. ವಾಕ್ ಮತ್ತು ಶ್ರವಣದೋಷ ಸಮಸ್ಯೆ ಅಥವಾ ಕಣ್ಣಿನ ಸಮಸ್ಯೆ ಕಂಡು ಬಂದ 0-14 ವರ್ಷದೊಳಗಿನ ಮಕ್ಕಳಿಗೆ ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಕಚೇರಿಯಲ್ಲಿ ಸೂಚಿತ ಶ್ರವಣ ಯಂತ್ರ ನೀಡಲಾಗುವುದು ಎಂದರು.

ಜಿಲ್ಲಾದ್ಯಂತ ಶ್ರವಣದೋಷವುಳ್ಳ ಮಕ್ಕಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಆರೋಗ್ಯ ಇಲಾಖೆಯೊಂದಿಗೆ ವಾಣಿ ಫೌಂಡೇಷನ್ ಸಂಸ್ಥೆ ಕೈಜೋಡಿಸಲಿದೆ. ಅಂಗನವಾಡಿ ಮತ್ತು ಶಾಲೆಗಳಲ್ಲಿ ಶ್ರವಣದೋಷವುಳ್ಳ ಮಕ್ಕಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ಶ್ರವಣದೋಷ ಪತ್ತೆಯಾದ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ತಂಡದಿಂದ ಜಿಲ್ಲೆಯಲ್ಲಿ 9 ಶ್ರವಣವುಳ್ಳ ಮಕ್ಕಳನ್ನು ಪತ್ತೆ ಹಚ್ಚಲಾಗಿದ್ದು, ಪತ್ತೆ ಹಚ್ಚುವ ಕಾರ್ಯ ಜಾರಿಯಲ್ಲಿದೆ ಎಂದು ತಿಳಿಸಿದರು. ನಂತರ ಶ್ರವಣ ದೋಷ ಪತ್ತೆಯಾದ ದಿಲೀಪ್, ಅನಿಲ್ ಕುಮಾರ್, ವಿಷ್ಣು, ತೇಜಸ್ವಿನಿ ಅವರಿಗೆ ಶ್ರವಣ ಸೂಚಕ ಯಂತ್ರ ವಿತರಿಸಿದರು.

ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ವಿಭಾಗದ ಮುಖ್ಯಸ್ಥೆ ಡಾ.ಸುಚಿತ್ರ ಮಾತನಾಡಿ, 1000 ಮಕ್ಕಳಲ್ಲಿ 6 ಮಕ್ಕಳಿಗೆ ಶ್ರವಣದೋಷ ಕಂಡು ಬರುವುದರಿಂದ ಆರಂಭದ ಹಂತದಲ್ಲಿಯೇ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿ ಅಗತ್ಯ ಚಿಕಿತ್ಸೆ ನೀಡಬೇಕು ಎಂದರು.

ಫಲಾನುಭವಿಗಳ ಪಾಲಕರಾದ ಮಂಜುಳಾ ಮತ್ತು ಪುಟ್ಟಮ್ಮ ಅನುಭವ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸಿದ್ಧಾರ್ಥ ವೈದ್ಯಕೀಯ ಮಹಾ ವಿದ್ಯಾಲಯದ ಡಾ.ಜ್ಯೋತಿ ಸ್ವರೂಪ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಜಿಲ್ಲಾಸ್ಪತ್ರೆಯ ಡಾ.ಜಯಂತ್, ತಾಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ್, ವಾಣಿ ಫೌಂಡೇಶನ್ ಶಿಕ್ಷಕ ಅಶ್ವಿನಿ, ಕಾವ್ಯ ಮತ್ತಿತರರು ಇದ್ದರು.

10000 ಮಂದಿಗೆ ತರಬೇತಿ : 2007ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಕಾರ್ಯಕ್ರಮದಡಿ ತಜ್ಞ ವೈದ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಹಾಗೂ ಪೋಷಕರು ಸೇರಿ 10000 ಮಂದಿಗೆ ಶ್ರವಣದೋಷ ತಡೆಗಟ್ಟುವ ಕುರಿತು 37 ಕ್ಯಾಂಪ್‌ಗಳನ್ನು ನಡೆಸಿ ತರಬೇತಿ ನೀಡಲಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹಿಮಾ ತಿಳಿಸಿದರು. ಕ್ಯಾಂಪ್‌ಗಳಲ್ಲಿ ಶ್ರವಣದೋಷವುಳ್ಳ 35 ಮಕ್ಕಳನ್ನು ಪತ್ತೆ ಹಚ್ಚಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net