

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ತಾಲೂಕಿನ ದೊಡ್ಡಸಣ್ಣೆ ಗ್ರಾಮದಲ್ಲಿ ದಾಂಪತ್ಯ ಕಲಹ ಗುರುವಾರ ರಾತ್ರಿ ಪತ್ನಿಯ ಹತ್ಯೆಯಲ್ಲಿ ಅಂತ್ಯವಾಗಿದೆ.
ರಜನಿ(28) ಮೃತಪಟ್ಟಿದ್ದು, ಪತಿ ಮುನಿಆಂಜಿನಪ್ಪ(32)ನನ್ನು ಪೊಲೀಸರು ಬಂಧಿಸಿದ್ದಾರೆ.
ಹೊಟ್ಟೆ,ಬೆನ್ನಿಗೆ ಇರಿದು ಹತ್ಯೆ: ಹೆಂಡತಿಯ ನಡತೆ ಬಗ್ಗೆ ಅನುಮಾನಗೊಂಡ ಗಂಡ ಟೈಲರಿಂಗ್ ಕತ್ತರಿಯಿಂದ ಹೊಟ್ಟೆ ಮತ್ತು ಬೆನ್ನಿಗೆ ಇರಿದು ಹತ್ಯೆ ಮಾಡಿರುವ ಘಟನೆ ದೇವನಹಳಳಿ ಪೋಲಿಸ್ ಠಾಣೆ ವ್ಯಾಪ್ತಿಯ ದೊಡ್ಡಸಣ್ಣೆ ಗ್ರಾಮದಲ್ಲಿ ನಡೆದಿದೆ.
12 ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ ನಡುವೆ ಇತ್ತೀಚಿಗೆ ದಾಂಪತ್ಯ ಕಲಹ ಏರ್ಪಟ್ಟಿತ್ತು. ಎರಡು ದಿನದ ಹಿಂದೆ ಇಬ್ಬರ ನಡುವೆ ಜಗಳವಾಗಿದ್ದು, ಪತ್ನಿ ರಜನಿ ಸಂಬಂಧಿಕರ ಮನೆಗೆ ತೆರಳಿದ್ದು ಗುರುವಾರ ಸಂಜೆ ಮನೆಗೆ ವಾಪಸ್ಸಾಗಿದ್ದರು. ಎಲ್ಲರೂ ಊಟ ಮಾಡಿ ಮಲಗಿದ ನಂತರ ರಾತ್ರಿ ದಂಪತಿ ನಡುವೆ ಜಗಳ ಆರಂಭವಾಗಿತ್ತು. ಕೊಠಡಿಯಿಂದ ಚೀರಾಟ ಕೇಳಿಬಂದ ಹಿನ್ನೆಲೆಯಲ್ಲಿ ರಜನಿ ಸಹೋದರ ಅರುಣ್‌ಕುಮಾರ್ ಹಾಗೂ ನೆರೆಹೊರೆಯವರು ಗಾಬರಿಗೊಂಡು ಕೊಠಡಿಯ ಬಾಗಿಲು ಒಡೆದು ಒಳನುಗ್ಗಿದ್ದರು. ಈ ವೇಳೆಗಾಗಲೇ ಕತ್ತರಿಯಿಂದ ರಜಿನಿಯ ಹೊಟ್ಟೆ, ಬೆನ್ನಿಗೆ ಕತ್ತರಿಯಿಂದ ಮಾರಣಾಂತಿಕ ಹಲ್ಲೆ ನಡೆದಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ದೇವನಹಳ್ಳಿಯ ಮಾನಸ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ರಜನಿ ಕೊನೆಯುಸಿರೆಳೆದಿದ್ದರು. ಪ್ರಕರಣ ದಾಖಲಿಸಿಕೊಂಡ ದೇವನಹಳ್ಳಿ ಪೊಲೀಸರು ಆರೋಪಿ ಮುನಿ ಆಂಜಿನಪ್ಪನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.