ಕಿಸಾನ್ ಸಮ್ಮಾನ್ ಪ್ರತೀ ರೈತನಿಗೆ ಸಿಗಬೇಕು

dhisha
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ನೀಡುತ್ತಿರುವ 6 ಸಾವಿರ ರೂ.ಗಳ ಅರ್ಥಿಕ ನೆರವು ಜಿಲ್ಲೆಯ ಪ್ರತಿ ಅರ್ಹ ರೈತನಿಗೆ ಸಿಗುವಂತಾಗಬೇಕು ಎಂದು ಸಂಸದ ಡಾ. ಕೆ. ಸುಧಾಕರ್ ಸೂಚಿಸಿದರು.

ದೇವನಹಳ್ಳಿ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲಿ ಸೋಮವಾರ ಹಮ್ಮಿಕೊಂಡಿದ್ದ ಮೊದಲನೇ ತ್ರೈಮಾಸಿಕ ದಿಶಾ ಸಮಿತಿ ಸಭೆಯಲ್ಲಿ ಮಾತನಾಡಿದರು.

ಈ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕವಾಗಿ ಬೆಂಬಲವಾಗಿ ನಿಲ್ಲಲು ವಾರ್ಷಿಕ ಕೇಂದ್ರ ಸರ್ಕಾರದಿಂದ 6 ಸಾವಿರ ರೂ.ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 1,70 ಲಕ್ಷ ರೈತರಿದ್ದು ಕಳೆದ ಸಾಲಿನಲ್ಲಿ 63,375 ರೈತರು ಮಾತ್ರ ಯೋಜನೆಯ ಸೌಲಭ್ಯ ಪಡೆದುಕೊಂಡಿದ್ದಾರೆ. ಈ ಯೋಜನೆಯ ಬಗ್ಗೆ ಜಿಲ್ಲೆಯಲ್ಲಿ ವಿಶೇಷ ಅಭಿಯಾನ ಕೈಗೊಳ್ಳುವ ಮೂಲಕ ಕ್ಷೇತ್ರ ಭೇಟಿ ನೀಡಿ ಪ್ರತೀ ರೈತನಿಗೂ ಈ ಯೋಜನೆಯ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕ್ರೆಡಿಟ್ ಕಾರ್ಡ್ ಸದುಉಪಯೋಗ ಪಡೆಯಿರಿ: ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯು ರೈತರಿಗೆ ಕೃಷಿ ಮತ್ತು ಕೃಷಿ ಆಧಾರಿತ ಚಟುವಟಿಕೆ ಕೈಗೊಳ್ಳಲು ಬ್ಯಾಂಕಿಂಗ್ ವ್ಯವಸ್ಥೆಯಿಂದ ಸಾಕಷ್ಟು ಮತ್ತು ಸಕಾಲಿಕ ಸಾಲ ಬೆಂಬಲ ಒದಗಿಸುವ ಗುರಿ ಹೊಂದಲಾಗಿದೆ. ಕೃಷಿ ಕಾರ್ಯಾಚರಣೆಗಳಿಗೆ ಸಾಕಷ್ಟು ಸಾಲವನ್ನು ಒದಗಿಸುವ ಉದ್ದೇಶದಿಂದ ಕೆಸಿಸಿ ಯೋಜನೆ ಪರಿಚಯಿಸಲಾಯಿತು ಎಂದು ಸಂಸದರು ಮಾಹಿತಿ ನೀಡಿದರು. ಕೇಂದ್ರ ಸರ್ಕಾರ ರೈತರಿಗೆ ಶೇ.2ಬಡ್ಡಿ ಸಬ್ವೆನ್ಷನ್ ಮತ್ತು ಶೇ.3 ತ್ವರಿತ ಮರುಪಾವತಿ ಪ್ರೋತ್ಸಾಹ ನೀಡುತ್ತದೆ, ಹೀಗಾಗಿ ಸಾಲವು ವಾರ್ಷಿಕ ಶೇ.4 ಸಬ್ಸಿಡಿ ದರದಲ್ಲಿ ಲಭ್ಯವಾಗುತ್ತಿದೆ. ಈ ಯೋಜನೆ ಬಗ್ಗೆ ರೈತರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ಜೆಜೆಎಂ ಕಾಮಗಾರಿಗೆ 968 ಕೋಟಿ ರೂ.ಅನುದಾನ: ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಕಲ್ಪಿಸುವ ದೃಷ್ಟಿಯಿಂದ ಜಲ ಜೀವನ್‌ಮಿಷನ್ ಯೋಜನೆ ಜಾರಿಗೆ ತರಲಾಗಿದೆ. ಜಿಲ್ಲೆಗೆ 968.15 ಕೋಟಿ ರೂ.ಅನುದಾನ ಬಿಡುಗಡೆ ಆಗಿದೆ. 616 ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿ ಪೂರ್ಣಗೊಂಡಿರುವ ಗ್ರಾಮಗಳಲ್ಲಿ ಖುದ್ದು ಪರಿಶೀಲನೆ ನಡೆಸಲಾಗುವುದು ಎಂದು ಡಾ.ಕೆ.ಸುಧಾಕರ್ ತಿಳಿಸಿದರು. ಜಿಲ್ಲೆಯಲ್ಲಿ 770 ಶುದ್ಧ ಕುಡಿಯುವ ನೀರು ಘಟಕಗಳಿದ್ದು 4 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿ ಬಂದಿದೆ. 1 ಸಾವಿರಕ್ಕಿಂತ ಅಧಿಕ ಜನ ವಾಸಿಸುವ ಗ್ರಾಮಗಳಲ್ಲಿ ಹೆಚ್ಚುವರಿಯಾಗಿ ಇನ್ನೊಂದು ಘಟಕ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿ. ಅಂಗನವಾಡಿ, ಶಾಲಾ ಕಾಲೇಜು, ಆಸ್ಪತ್ರೆ, ಹಾಸ್ಟೆಲ್, ಸಾರ್ವಜನಿಕ ಪ್ರದೇಶಗಳಲ್ಲಿನ ಶುದ್ಧ ಕುಡಿಯುವ ನೀರು ಘಟಕಗಳನ್ನು ಖಡ್ಡಾಯವಾಗಿ ಕಾಲಕಾಲಕ್ಕೆ ಪರೀಕ್ಷೆ ನಡೆಸಿ ಎಂದರು.

ಜನರಿಂದ ದೂರು: ದೇವನಹಳ್ಳಿ ತಾಲೂಕು ಬೂದಿಗೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ ಬಹುದಿನಗಳಿಂದ ಸಮಸ್ಯೆ ಆಗಿಯೇ ಉಳಿದಿದೆ. ಕೊಳವೆ ಬಾವಿಗಳಲ್ಲಿ ನೀರು ಕಡಿಮೆ ಆಗಿದೆ. ವಾರಕ್ಕೆ, 15 ದಿನಕ್ಕೊಮ್ಮೆ ನೀರು ಸಿಗುತ್ತಿದೆ ಅಲ್ಲಿನ ನಿವಾಸಿಗಳು ದೂರು ನೀಡಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಪರಿಹಾರ ಕಂಡುಹಿಡಿದು ನೀರಿನ ಬವಣೆ ನೀಗಿಸಲು ಕ್ರಮ ವಹಿಸಬೇಕು ಎಂದು ಸಂಸದರು ತಾಕೀತು ಮಾಡಿದರು.

ಕೇಂದ್ರಕ್ಕೆ ಮನವಿ: ಕೆಂದ್ರ ಸರ್ಕಾರದಲ್ಲಿ ಅನುದಾನಕ್ಕೆ ಯಾವುದೇ ಕೊರತೆ ಇಲ್ಲ. ಜಿಲ್ಲೆಯಿಂದ ಇದುವರೆಗೆ ಯಾವುದೇ ಇಲಾಖೆಯಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ. ವಸತಿ ಶಾಲೆ, ನಿಲಯಗಳ ಸ್ಥಾಪನೆ, ವೃದ್ಧಾಪ್ಯ ವೇತನ, ಅನಾಥಾಶ್ರಮ, ಮನೆ ನಿರ್ಮಾಣ, ಶೀಥಲ ಶೇಖರಣಾ ಕೇಂದ್ರ ಈ ಎಲ್ಲವನ್ನೂ ಸ್ಥಾಪಿಸಲು ಅವಕಾಶವಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪ್ರಸ್ತಾವನೆ ಸಲ್ಲಿಸಿ, ಕೇಂದ್ರದಲ್ಲಿ ಅನುಮೋದನೆ ಮಾಡಿಸುತ್ತೇನೆ ಎಂದು ಸಂಸದರು ಭರವಸೆ ನೀಡಿದರು.

ಜಾಗೃತಿ ಮೂಡಿಸಲಾಗುವುದು: ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರ ಆದಾಯ ದ್ವಿಗುಣಗೊಳಿಸುವುದು, ಮಹಿಳೆಯರ ಸಬಲೀಕರಣ, ಆರೋಗ್ಯ ಕ್ಷೇತ್ರ, ತಂತ್ರಜ್ಞಾನ, ವೈಜ್ಞಾನಿಕ ಕ್ಷೇತ್ರ ಹಾಗೂ ಇತರೆ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ವಿಕಸಿತ ಭಾರತ ನಿರ್ಮಾಣಕ್ಕೆ ಹಲವು ಜನಪರ ಯೋಜನೆಗಳು ಜಾರಿಗೆ ತರಲಾಗಿದೆ. ಅಂತಹ ಕೇಂದ್ರ ಪುರಸ್ಕೃತ ಸರ್ಕಾರದ ಯೋಜನೆಗಳ ಸೌಲಭ್ಯ ಪ್ರತಿ ಫಲಾನುಭವಿಗೆ ತಲುಪಲು ಅಧಿಕಾರಿಗಳ ಸಮನ್ವಯತೆ ಮತ್ತು ಕಾರ್ಯಕ್ಷಮತೆ ಮುಖ್ಯ. ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ವಿವಿಧ ಹಂತಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net