

ಚಿತ್ರದುರ್ಗ: ಚಿಕ್ಕ ವಯಸ್ಸಿನಲ್ಲಿಯೇ ಶೋಷಿತ ಸಮಾಜ ಭೋವಿ ಸಮುದಾಯದ ಪ್ರಗತಿ ಶ್ರಮಿಸಿದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ವಯಸ್ಸು ಚಿಕ್ಕದು ಆಗಿದ್ದರೂ ಸಾಧನೆ ಬಹುದೊಡ್ಡದು ಎಂದು ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ ಬಣ್ಣಿಸಿದರು.
ಭೋವಿ ಗುರುಪೀಠದಲ್ಲಿ ಸೋಮವಾರ ಆಯೋಜಿಸಿದ್ದ ಭೋವಿ ಜನೋತ್ಸವದಲ್ಲಿ ಮಾತನಾಡಿ, ಕೆಲಸ ಮಾಡುವ ನಿಷ್ಕಲ್ಮಶ ಮನಸ್ಸಿನ ಶ್ರೀಗಳು. ಪ್ರಬುದ್ಧ ಚಿಂತನೆ, ನಡವಳಿಕೆ ಮೂಲಕ ಪ್ರಭಾವಿಗಳ ಮನಗೆದ್ದ ವೀರ ಸನ್ಯಾಸಿ ಎಂದರು.
ನಾಡಿನ ಸಂತರನ್ನು ಆತ್ಮೀಯತೆ, ಮಮತೆಯಿಂದ ಮನಗೆದ್ದಿರುವ ಸ್ವಾಮೀಜಿ, ಸಾವಿರಾರು ಬಡ ಮಕ್ಕಳನ್ನು ದತ್ತು ಪಡೆದು, ವಿದ್ಯೆಗೆ ಹಚ್ಚಿದ ಅಪರೂಪದ ಗುರುಗಳು ಎಂದು ಹೇಳಿದರು.
ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಗುರುಕುಲ, ಮಠ-ಪೀಠಗಳ ಪರಂಪರೆ ಕೆಲವು ಸಮಾಜಗಳಿಗೆ ಸೀಮಿತವಾಗಿತ್ತು. ಆದರೆ, ಹಿಂದುಳಿದ ದಲಿತ ಶೋಷಿತರಿಗೆ 21ನೇ ಶತಮಾನದಲ್ಲಿ ಮಠಾಧೀಶರಾಗಿ ಸಮಾಜವನ್ನು ಕಟ್ಟಿಕೊಳ್ಳುವ ಅವಕಾಶ ದೊರೆಯಿತು ಎಂದರು.
ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಬುದ್ಧಿವಂತರು, ಹಣವಂತರ ಮಧ್ಯೆ ಮಾನವೀಯತೆ ಹಾಗೂ ಹೃದಯವಂತಿಕೆ ಭೋವಿ ಶ್ರೀಗಳಲ್ಲಿ ನೋಡಲು ಸಾಧ್ಯ ಎಂದು ಹೇಳಿದರು.
450 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ರಾಮಪ್ಪ, ಭೋವಿ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಚ್.ಲಕ್ಷ್ಮಣ, ಮಠದ ಸಿಓ ಗೌನಹಳ್ಳಿ ಗೋವಿಂದಪ್ಪ, ನಗರಸಭೆ ಸದಸ್ಯ ತಿಮ್ಮಣ್ಣ, ಮುಖಂಡರಾದ ಕೃಷ್ಣಮೂರ್ತಿ, ಚಂದ್ರಶೇಖರ್, ಆಂಜನೇಯ, ದಾವಣಗೆರೆಯ ವೈ.ರಾಮಪ್ಪ, ಹಾವೇರಿಯ ರವಿ ಪೂಜಾರ, ಹೈಕೋರ್ಟ್ ವಕೀಲ ಶಂಕ್ರಪ್ಪ, ಶಿವರುದ್ರಯ್ಯಸ್ವಾಮಿ, ರವಿ ಮಾಕಳಿ ಇದ್ದರು.
ವಿದ್ಯಾವಂತ, ಜ್ಞಾನವಂತ, ಪ್ರಜ್ಞಾವಂತರ ಒಗ್ಗೂಡಿದರೆ ಹೋರಾಟ ದಿಟ್ಟ ಪಥದಲ್ಲಿ ಸಾಗಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಶಿಕ್ಷಣವಂತರಲ್ಲಿ ಸಂಘಟನೆ ಕೊರತೆ ಕಾಣುತ್ತಿದೆ. ಸಂಘಟನೆ ಮುಖ್ಯವಾಗಿ ಸಮಾಜದ ಅಭಿವೃದ್ಧಿ ದೃಷ್ಠಿಯಲ್ಲಿ ನೋಡಿ ಆ ರಥವನ್ನು ಎಳೆಯಬೇಕು. ವಿದ್ಯಾವಂತರು ಸಮಾನತೆ ದೃಷ್ಠಿಕೋನ ಇಟ್ಟುಕೊಂಡು ಸಮಾಜವನ್ನು ಸಮರ್ಥ ಮತ್ತು ಸದೃಢ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು.- ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ