

ವಿಜಯವಾಣಿ ಸುದ್ದಿಜಾಲ ಧಾರವಾಡ
ಸರ್. ಸಿದ್ಧಪ್ಪ ಕಂಬಳಿ ಆಗಿನ ಕಾಲದ ಜಾತಿಯಾಧಾರಿತ ಸಾಮಾಜಿಕ ತಾರತಮ್ಯ ತೊರೆದು ಹಾಕಿ ಸಮ ಸಮಾಜ ನಿಮಿರ್ಸುವಲ್ಲಿ ಶ್ರಮಿಸಿದ ಧೀಮಂತ ವ್ಯಕ್ತಿ ಎಂದು ಹಿರೇಮಲ್ಲೂರ ಈಶ್ವರನ್ ಕಾಲೇಜಿನ ಪ್ರಾಧ್ಯಾಪಕ ಡಾ. ಈರಣ್ಣ ಇಂಜಗನೇರಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು, ಸರ್ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನ ಆಶ್ರಯದಲ್ಲಿ ಕಾಲೇಜು ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಸರ್. ಸಿದ್ಧಪ್ಪ ಕಂಬಳಿ ಪ್ರತಿಷ್ಠಾನ ದತ್ತಿ ಕಾರ್ಯಕ್ರಮದಲ್ಲಿ ಸರ್. ಸಿದ್ಧಪ್ಪ ಕಂಬಳಿ ಸಾಮಾಜಿಕ ನ್ಯಾಯ ಕುರಿತು ಉಪನ್ಯಾಸ ನೀಡಿದರು.
ಶಿಕ್ಷಣ ಸಕಲ ಸಮಸ್ಯೆಗಳಿಗೆ ಸಂಜೀವಿನಿ ಎಂದು ತಿಳಿದ ಸಿದ್ಧಪ್ಪ ಕಂಬಳಿ, ಶಿಕ್ಷಣದಿಂದ ವಂಚಿತರಾದವರಿಗೆ ಜಾತಿಯ ತಾರತಮ್ಯವಿಲ್ಲದೇ ಅವಕಾಶ ಕಲ್ಪಿಸಿದ್ದರು. ಯಾವುದೇ ಜಾತಿಯವರು ಸಹಾಯ ಕೇಳಿ ಬಂದರೂ ಎಂದಿಗೂ ಬರಿಗೈಯಲ್ಲಿ ಕಳುಹಿಸಲಿಲ್ಲ. ಬಡತನದಲ್ಲಿ ಹುಟ್ಟಿ ಬೆಳೆದ ಅವರು ತಮ್ಮ ಸಾಧನೆಯ ಬಲದಿಂದ ಉನ್ನತ ಮಟ್ಟಕ್ಕೇರಿ ಮುಂಬೈ ಸರ್ಕಾರದಲ್ಲಿ 7 ಇಲಾಖೆಗಳ ಮಂತ್ರಿಗಿರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದರು ಎಂದರು.
ಡಾ. ಎಸ್. ಆರ್. ಮಂಜುಳಾ ಮಾತನಾಡಿದರು. ಕವಿವಿ ಕುಲಪತಿ ಡಾ. ಕೆ.ಬಿ. ಗುಡಸಿ ಮಾತನಾಡಿ, ಸಿದ್ಧಪ್ಪ ಕಂಬಳಿ ಅವರ ಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನ ಇರದಿದ್ದರೆ ಧಾರವಾಡ ವಿದ್ಯಾಕಾಶಿ ಆಗಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲಿಯವರೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕಾಲೇಜ ಇರುತ್ತದೆಯೋ ಅಲ್ಲಿಯವರೆಗೆ ಕಂಬಳಿ ಅವರ ಹೆಸರು ಅಜರಾಮರ. ಅವರೊಬ್ಬ ಮುತ್ಸದ್ಧಿ ರಾಜಕಾರಣಿ ಎಂದರು.
ಶಿವಾನಂದ ಭಾವಿಕಟ್ಟಿ, ಎಂ.ಎಂ. ಚಿಕ್ಕಮಠ, ರಾಮಚಂದ್ರ ಧೋಂಗಡೆ, ಕೆ.ಎಂ. ಅಂಗಡಿ, ಪ್ರಾಧ್ಯಾಪಕರು, ಇತರರು ಇದ್ದರು. ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.